India

ಬೇಸಿಗೆಯಲ್ಲಿ ನೀರಿನ ಅಭಾವವಾದರೆ ವಿಐಪಿಗಳಿಗಳೂ ತೊಂದರೆ ಎದುರಿಸಬೇಕು: ಕೇಜ್ರಿವಾಲ್

Pinterest LinkedIn Tumblr

kejri

ನವದೆಹಲಿ: ಬೇಸಿಗೆ ಹಿನ್ನೆಲೆಯಲ್ಲಿ ರಾಜಧಾನಿಯ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುವಲ್ಲಿ  ತೊಂದರೆಯುಂಟಾದಲ್ಲಿ ದೆಹಲಿಯ ಗಣ್ಯರಿಗೆ ನೀರನ್ನು ಕಡಿತಗೊಳಿಸುವುದಾಗಿ ತಿಳಿಸಿರುವ ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೀರಿನ ಮಿತ ಬಳಕೆ ಬಗ್ಗೆ ಗಣ್ಯರಿಗೆ ಮುನ್ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಧಾನಿಯಲ್ಲಿ ಬೇಸಿಗೆ ಆವರಿಸುವ ಕಾರಣ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದಲ್ಲಿ ಇಲ್ಲಿನ ಗಣ್ಯರಿಗೆ ಪೂರೈಕೆ ಮಾಡಲಾಗುವ ನೀರನ್ನು ಕಡಿತಗೊಳಿಸಲಾಗುವುದು. ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ರಾಯಭಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಇಲ್ಲಿನ ಎಲ್ಲಾ ವಿಐಪಿಗಳೂ ಈ ಬೇಗೆಯನ್ನು ಸಹಿಸಿಕೊಳ್ಳಬೇಕು ಎಂದಿದ್ದಾರೆ.

ಈ ವೇಳೆ ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದ ಮೇಲೂ ಹರಿಹಾಯ್ದ ಅರವಿಂದ್ ಕೇಜ್ರಿವಾಲ್, ದೆಹಲಿ ಚುನಾವಣೆಯ ನಂತರ ಹರಿಯಾಣದ ಪಾಟ್ನಾದಲ್ಲಿ ಸರ್ಕಾರವು ನೀರಿನ ಪೂರೈಕೆಯನ್ನು ಸಾಕಷ್ಟು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.

ಇದೇ ವೇಳೆ, ನೀರಿನ ಮೇಲೆ ರಾಜಕೀಯ ಮಾಡಬಾರದು. ಈ ವರ್ಷ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಆ ತೊಂದರೆ ಎಲ್ಲರೂ ಅನುಭವಿಸುವ ಹಾಗೆ ದೆಹಲಿ ಜಲ ಮಂಡಳಿ ನೋಡಿಕೊಳ್ಳಲಿದೆ. ಈ ವ್ಯತ್ಯಯದಲ್ಲಿ ನನ್ನನ್ನೂ ಸೇರಿದಂತೆ ಎಲ್ಲಾ ವಿಐಪಿಗಳೂ ಅನುಭವಿಸಲಿದ್ದಾರೆ ಎಂದರು.

ಪ್ರಸ್ತುತ ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಲೋಕಸಭಾ ಸದಸ್ಯರು ಸೇರಿದಂತೆ ಇತರರಿಗೆ ನಿರಂತರವಾಗಿ ನೀರಿನ್ನು ಪೂರೈಸಲಾಗುತ್ತಿದೆ.

ಪಕ್ಕದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ನೀರು ಪೂರೈಕೆ ಮೇಲೆ ದೆಹಲಿ ಅವಲಂಬಿತವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ದೆಹಲಿಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರುವುದು ಸರ್ವೇ ಸಾಮಾನ್ಯ.

Write A Comment