ನವದೆಹಲಿ, ಜೂ.5: ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯಲು ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಸೆಪ್ಟೆಂಬರ್‌ನಲ್ಲಿ ಪಕ್ಷದ ಸಾರಥ್ಯ ವಹಿಸುವುದು ಖಚಿತವಾಗಿದೆ.
ಪುತ್ರನಿಗಾಗಿ ಅಧಿಕಾರ ತ್ಯಾಗ ಮಾಡಲು ಅಧಿನಾಯಕಿ ಸೋನಿಯಾಗಾಂಧಿ ಸಮ್ಮತಿಸಿದ್ದಾರೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಬೆಂಗಳೂರಿನಲ್ಲಿ ಎಐಸಿಸಿ ಮಹಾ ಅಧಿವೇಶನ ನಡೆಯಲಿದ್ದು, ರಾಹುಲ್‌ಗೆ ಪಟ್ಟ ಕಟ್ಟಲು ಕಾಂಗ್ರೆಸ್ ಚಿಂತಕರ ಚಾವಡಿ ತೀರ್ಮಾನಿಸಿದೆ. ಈ ಹಿಂದೆ 2010ರ ಡಿಸೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಐಸಿಸಿ ಮಹಾ ಅಧಿವೇಶನ ನಡೆದಿತ್ತು. ಇಲ್ಲಿಯೇ ರಾಹುಲ್‌ಗಾಂಧಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಆದರೂ ಜೈಪುರದಲ್ಲಿ ನಡೆದ ಅಧಿವೇಶನದಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.
ಈ ವರ್ಷದ ಅಂತ್ಯಕ್ಕೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ನಂತರ ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಚುನಾವಣೆ ನಿಗದಿಯಾಗಲಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಹುಲ್‌ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡಲು ಹಿರಿಯ ನಾಯಕರು ಅಧಿನಾಯಕಿ ಮೇಲೆ ಒತ್ತಡ ಹಾಕಿದ್ದರು. ನಾಗಾಲೋಟದಲ್ಲಿ ಓಡುತ್ತಿರುವ ಬಿಜೆಪಿ ಅಶ್ವಮೇಧವನ್ನು ಕಟ್ಟಿ ಹಾಕಲು ರಾಹುಲ್‌ಗೆ ಸಾರಥ್ಯ ನೀಡಬೇಕು. ಪ್ರಧಾನಿ ನರೇಂದ್ರಮೋದಿಗೆ ಪರ್ಯಾಯ ನಾಯಕತ್ವ ಬಿಂಬಿಸುವಂತೆ ಕಾಂಗ್ರೆಸ್‌ನ ಒಂದು ಗುಂಪು ಮನವಿ ಮಾಡುತ್ತಲೇ ಇತ್ತು. ಇದೀಗ ಈ ಎಲ್ಲ ಅಂತೆಕಂತೆಗಳು, ಊಹಾಪೋಹಗಳಿಗೆ ತೆರೆ ಎಳೆದಿರುವ ಸೋನಿಯಾಗಾಂಧಿ ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಪುತ್ರನ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿ ಪಡಿಸಿದ್ದಾರೆ. ಎಲ್ಲವೂ ನಿಗದಿಯಂತೆ ನಡೆದರೆ ರಾಹುಲ್‌ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಸೆಪ್ಟೆಂಬರ್‌ನಲ್ಲಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.