ಡಮಾಸ್ಕಸ್: ಆಂತರಿಕ ಸಂಘರ್ಷ ಕಾವೇರುತ್ತಿರುವ ಸಿರಿಯಾದಲ್ಲಿನ ಬಹುತೇಕ ಜನರು ಯುರೋಪ್‌ಗೆ ವಲಸೆ ಹೋಗುತ್ತಿದ್ದಾರೆ. ಇನ್ನುಳಿದ ಜನರು ಇಲ್ಲಿನ ಸರ್ಕಾರ ಮತ್ತು ಭಿನ್ನಮತೀಯ ಸಂಘಟನೆಗಳ ಹೋರಾಟದ ನಡುವೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಸಿರಿಯಾದ ಆಂತರಿಕ ಯುದ್ಧ ಇಲ್ಲಿನ ನಾಗರಿಕರಿಗೆ ಕೊಟ್ಟದ್ದು ಹಸಿವು ಮಾತ್ರ!
ಸಿರಿಯಾದ ಗ್ರಾಮಗಳಲ್ಲೀಗ ಹಸಿವು ತಾಂಡವವಾಡುತ್ತಿದೆ. ಅಲ್ಲಿಗೆ ಭೇಟಿ ನೀಡಿದ ಮಾನವ ಹಕ್ಕುಗಳ ಹೋರಾಟಗಾರರು ಹಸಿವಿನಿಂದ ಕಂಗೆಟ್ಟ ಜನರ ಚಿತ್ರವನ್ನು ತೆಗೆದಿದ್ದು, ಅಲ್ಲಿನ ಜನರ ದುಸ್ಥಿತಿ ಈ ಚಿತ್ರಗಳಲ್ಲಿ ವ್ಯಕ್ತವಾಗುತ್ತಿದೆ.
ಫೌವಾ, ಕಿಫಾರ್ಯ, ಇದ್‌ಲಿಬ್ ಎಂಬೀ ಮೂರು ಗ್ರಾಮಗಳಲ್ಲಿನ ಜನತೆಯ ಸಂಕಷ್ಟ ಈ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕುತ್ತಿರುವ ಇಲ್ಲಿನ ಜನರು ನಾಯಿ ಬೆಕ್ಕುಗಳನ್ನು ಕೊಂದು ಹೊಟ್ಟೆ ತುಂಬಿಸುತ್ತಿದ್ದಾರೆ. ಇನ್ನು ಕೆಲವರು ಅಲ್ಲಲ್ಲಿ ಸಿಗುವ ಹಸಿರೆಲೆಗಳನ್ನು ಭಕ್ಷಿಸುತ್ತಿದ್ದಾರೆ. ಹಸಿವಿನಿಂದ ಕಂಗೆಟ್ಟು ಬರೀ ಎಲುಬುಗಳು ಮಾತ್ರ ಇವರ ದೇಹದಲ್ಲಿ ಕಾಣುತ್ತವೆ. ರೋಗ ಬಂದರೆ ಇಲ್ಲಿ ಇನ್ನೂ ಕಷ್ಟ. ಅನಸ್ತೇಷಿಯಾ ನೀಡದೆಯೇ ಇಲ್ಲಿ ಶಸ್ತ್ರಕ್ರಿಯೆ ಮಾಡಲಾಗುತ್ತಿದೆ. ಇಲ್ಲಿನ ಭಿನ್ನಮತೀಯರು ಮತ್ತು ಸೇನೆ ನಡುವಿನ ಯುದ್ಧದಲ್ಲಿ ಸ್ಫೋಟಗೊಳ್ಳದೇ ಇದ್ದ ಬಾಂಬ್ ಗಳು ಆಮೇಲೆ ಸ್ಫೋಟಗೊಂಡು ಇಲ್ಲಿನ ಜನರು ಗಾಯಗೊಂಡರೂ ಸರಿಯಾದ ಚಿಕಿತ್ಸೆ ಸಿಗದೆ ಒದ್ದಾಡುತ್ತಿದ್ದಾರೆ.
ಇಷ್ಟೇ ಅಲ್ಲ ಇಲ್ಲಿ ಹಿಮಪಾತವಾಗುತ್ತಿದ್ದೆ. ಈ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ತಮ್ಮ ಮನೆಯ ಬಾಗಿಲು ಕಿಟಕಿಗಳನ್ನೇ ಸುಟ್ಟು ಅಗ್ಗಿಷ್ಟಿಕೆ ಮಾಡುತ್ತಿದ್ದಾರೆ. ಈ ಕಷ್ಟದಿಂದ ಪಾರಾಗಲು ಜನರು ಯತ್ನಿಸುತ್ತಿದ್ದರೂ ವಲಸೆಗಾರರನ್ನು ತಡೆಯಲು ನಾಲ್ಕೈದು ಚೆಕ್‌ಪೋಸ್ಟ್‌ಗಳನ್ನೂ ಮಾಡಲಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.