ಉಡುಪಿ : ಒಂದು ಕಾಲದಲ್ಲಿ ಮಣಿಪಾಲವೆಂದರೆ ಕುಂಡೆಲ್ ಕಾಡು ಕಣಿವೆಯ ಚಿತ್ರ ಕಣ್ಮುಂದೆ ಸುಳಿದು ಜನರಲ್ಲಿ ಭಯ ಹಾಗೂ ದಟ್ಟ ಅರಣ್ಯದ ಆಲೋಚನೆ ಮಿಂಚಿ ಮರೆಯಾಗುವಂತೆ ಮಾಡುತ್ತಿತ್ತು. ಆದರೀಗ ಮಣಿಪಾಲವೆಂದರೆ ದೊಡ್ಡ ದೊಡ್ಡ ಕಟ್ಟಡ, ಮಾಲ್ ಗಳು ನೆನಪಾಗುತ್ತವೆ. ಜಾಗತೀಕರಣದ ಭರದಲ್ಲಿ ಮನುಷ್ಯ ಕಾಡುಗಳನ್ನು ಕಡಿದು ತನ್ನ ಶ್ರೀಮಂತಿಕೆಯನ್ನು ಪ್ರದರ್ಶನಕ್ಕಿಟ್ಟು ಪ್ರಕೃತಿಯನ್ನು ಧ್ವಂಸ ಮಾಡುತ್ತಿದ್ದಾನೆ. ಹಿಂದೆ ಕುಂಡೆಲ್ ಕಾಡು ಕಣಿವೆಯ ಆಸು – ಪಾಸಿನಲ್ಲಿ ಜನರು ಓಡಾಡುವಾಗ ನವಿಲು, ಹಾವು, ಮಂಗ, ಹಕ್ಕಿಗಳು ಹಾಗೂ ಇನ್ನಿತರ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳು ಕಾಣಸಿಗುತ್ತಿತ್ತು.
ಇಂದು ಆ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯ ಮರ – ಗಿಡಗಳು ನಾಶವಾಗಿ ಕಾಡು ಬರಡು-ಬರಡಾಗಿ ಹೋಗಿ ಪ್ರಕೃತಿ ಸೌಂದರ್ಯ ನಶಿಸಿ ಹೋಗಿದೆ. ಹಕ್ಕಿಗಳ ಚಿಲಿಪಿಲಿಯ ಬದಲಾಗಿ ವಾಹನಗಳ ಕರ್ಕಷ ಹಾರ್ನ್, ಮರ – ಗಿಡಗಳು ಬೀಸುವ ತಂಪಾದ ತಂಗಾಳಿಯ ಬದಲಾಗಿ ವಾಹನಗಳ ವಿಷಯುಕ್ತ ಹೊಗೆಯನ್ನು ಸೇವಿಸ ಹಾಳು ಭಾಗ್ಯ ನಮ್ಮದಾಗಿ ಹೋಗಿದೆ. ಹಲವು ವರುಷಗಳ ಹಿಂದೆ ಕುಂಡೆಲ್ ಕಾಡು ಕಣಿವೆಯ ನೀರು ಹರಿಯುವುದನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು. ಇದೀಗ ಆ ಕಣಿವೆಯ ನೀರನ್ನು ಪೈಪ್ ಮೂಲಕ ಹರಿಯ ಬಿಟ್ಟು ಆ ಪೈಪ್ ಅನ್ನು ಮಣ್ಣಿನಿಂದ ಮುಚ್ಚಿ ಅದರ ಮೇಲೆ ಬುದ್ದಿವಂತ ಸ್ವಾರ್ಥಿಯಾದ ಮನುಷ್ಯ ತನ್ನ ಮಹಲನ್ನು ಕಟ್ಟಿ ಪ್ರಕೃತಿಯನ್ನು ಭೋಗಿಸಿ ವೈಭೋಗದ ಜೀವನ ಸಾಗಿಸುತ್ತಿದ್ದಾನೆ.
ಕುಂಡೆಲ್ ಕಾಡು ಕಣಿವೆ ನಾಶವಾದ ಕುರಿತು ಪರಿಸರ ತಜ್ಞ ಎನ್.ಎ ಮಧ್ಯಸ್ಥ ವಿಷಾಧ ವ್ಯಕ್ತಪಡಿಸಿದ್ದು ಈ ರೀತಿ, ” ಕುಂಡೆಲ್ ಕಾಡು ಈಗ ಕಾಂಕ್ರೀಟ್ ಕಾಡಾಗಿದೆ. ಈ ಜಾಗಕ್ಕೆ ಒಳ್ಳೆಯ ಬೆಲೆ ಸಿಕ್ಕಿರಬೇಕು. ಹಾಗಾಗಿ ಮಠವು ಈ ಪ್ರದೇಶವನ್ನು ಮಾರಾಟ ಮಾಡಿತು. ಅವರಿಗೆ ಕಾಡಿನ ಕುರಿತು ಆಸಕ್ತಿಯಿರಲಿಲ್ಲ. ಇಂತಹ ಒಳ್ಳೆಯ ಕಾಡನ್ನು ಉಳಿಸಿಕೊಳ್ಳಬೇಕಿತ್ತು. ಬಲು ಅಪರೂಪದ ಪ್ರಾಣಿ-ಪಕ್ಷಿ, ಗಿಡ-ಮರಗಳು ಅಲ್ಲಿದ್ದವು. ನಾಗರಿಕರ ಹೆಸರಿನಲ್ಲಿ ಅನಾಗರೀಕತೆಯನ್ನು ತೋರಿಸಿದ್ದಾರೆ. ಕಾಡು ನಾಶವಾಗಿ ಉರಿ ಜಾಸ್ತಿಯಾಗಿದೆ. ಆಗಿನ ಕಾಲದಲ್ಲಿ ಬಾವಿಗಳಲ್ಲಿಯೂ ಶುದ್ಧವಾದ ನೀರು ತುಂಬಿಹರಿಯುತ್ತಿತ್ತು. ಆದರೆ ಇಂದು ಕೊಳಚೆ ನೀರು ಬಾವಿಗೆ ಬರುವಂತಾಗಿದೆ. ಮಠಗಳಿಗೆ ಇಂದು ಕಟ್ಟಿಗೆ ಬೇಕಾಗಿಲ್ಲ. ಈಗ ಅಡುಗೆಗಾಗಿ ಗ್ಯಾಸ್ ಬಂದಿದೆ. ಕಾಡನ್ನು ಮಾರಾಟ ಮಾಡಿ ನಾಶವಾಗಿಸಿರುವುದು ದುರದೃಷ್ಟಕರ. ಇವನ್ನೆಲ್ಲಾ ಯಾರಿಗೆ ಹೇಳುವುದು ಹೇಳಿ ?!!” ಎನ್ನುತ್ತಾರೆ.
ದಿ.ಡಾ. ವಿ.ಎಸ್ ಆಚಾರ್ಯರ ಪುತ್ರ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪ್ರೊ. ಡಾ. ಕಿರಣ್ ಆಚಾರ್ಯ ಕುಂಡೆಲ್ ಕಾಡು ಕಣಿವೆಯ ಬಗ್ಗೆ ತಮ್ಮ ನೆನಪಿನ ಬುತ್ತಿಯನ್ನು ಗ.ಕ ದೊಡನೆ ಈ ರೀತಿಯಾಗಿ ಬಿಚ್ಚಿಟ್ಟಿದ್ದಾರೆ, “ನನ್ನ ಬಾಲ್ಯದಲ್ಲಿ ಕುಂಡೆಲ್ ಕಾಡು ದಟ್ಟ ಅರಣ್ಯವಾಗಿದ್ದು ಈ ಅರಣ್ಯ ಭಯವನ್ನೇ ಹುಟ್ಟಿಸುತ್ತಿತ್ತು. ಸಾಹಸ ಪ್ರವೃತ್ತಿಯವರಿಗೂ ಈ ಕಾಡು ಕುತೂಹಲ ಕೆರಳಿಸುತ್ತಿತ್ತು. ಹಾಗೆಯೇ ಇದೊಂದು ನೆಚ್ಚಿನ ವಿಶ್ರಾಂತಿ ತಾಣವೂ ಆಗಿತ್ತು. ಒಮ್ಮೆ ಮಣಿಪಾಲದಿಂದ ಕುಂಡೆಲ್ ಕಾಡಿಗೆ ಸೈಕ್ಲಿಂಗ್ ಮೂಲಕ ತೆರಳಿ ಸುಂದರ ರಮಣೀಯ ದೃಶ್ಯಗಳನ್ನು ಕಣ್ಣಾರೆ ಕಂಡು ಆ ಸೌಂದರ್ಯವನ್ನು ಕಣ್ಣಾರೆ ಕಂಡು ಅನುಭವಿಸಿದೆವು.”
“ವಿವಿಧ ಪ್ರಾಣಿ-ಪಕ್ಷಿಗಳ ಇಂಪಾದ ಧ್ವನಿ, ಬಗೆ ಬಗೆಯ ಮಂಗಗಳು, ಕಣಿವ್ರ್ಯ ಆಳದಲ್ಲಿ ನದಿಯ ಜುಳು – ಜುಳು ನಾದವು ಮೈ ಮನಸ್ಸನ್ನು ಪುಳಕಿತಗೊಳಿಸುತ್ತಿತ್ತು. ನನ್ನ ಸ್ನೇಹಿತರಾದ ಗುರುದಾಸ್ ಶೆಣೈ ( ಶ್ರೇಷ್ಠ ಕಲಾವಿದ ಜಿ.ಎಸ್ ಶೆಣೈರವರ ಮಗ ) ರಜಾ ಅವಧಿಯಲ್ಲಿ ಕುಂಡೆಲ್ ಕಾಡಿಗೆ ತೆರಳಿ ಜಲವರ್ಣದ ಚಿತ್ರಗಳನ್ನು ರಚಿಸುತ್ತಿದ್ದರು. ಒಮ್ಮೆ ನಾನೂ ಕೂಡಾ ಅಲ್ಲಿ ಜಲವರ್ಣ ಚಿತ್ರ ಬಿಡಿಸಲು ಅವರೊಂದಿಗೆ ಹೋಗಿದ್ದೆ. ಕುಂಡೆಲ್ ಕಾಡಿನಿಂದ ಪ್ರೇರೇಪಿತನಾಗಿ ನಾನೂ ಕೂಡಾ ಆ ಚಿತ್ರಣವನ್ನು ಜಲವರ್ಣದಲ್ಲಿ ದಾಖಲಿಸಿದ್ದೇನೆ. ಕೆಲವೊಮ್ಮೆ ನಮ್ಮ ಸ್ಕೌಟ್ಸ್ ತಂಡವೂ ಕೂಡಾ ಪಾದಯಾತ್ರೆಯ ಮೂಲಕ ಕಾಡನ್ನು ಪ್ರವೇಶಿಸುತ್ತಿತ್ತು. ಉಡುಪಿಯ ಸುತ್ತ-ಮುತ್ತಲಿನ ಸರೀಸೃಪಗಳನ್ನೂ ಕೂಡಾ ಈ ಕಣಿವೆಗೆ ತಂದು ಬಿಡುತ್ತಿದ್ದರು. ಕಾಲನ ಚಕ್ರದೊಳಗೆ ಕುಂಡೆಲ್ ಕಾಡು ಲೀನವಾಗಿ ಹೋಗಿದೆ.”
” ಒಮ್ಮೆ ಪರ್ಯಾಯದ ಕಟ್ಟಿಗೆ ರಥಕ್ಕಾಗಿ ಕುಂಡೆಲ್ ಕಾಡಿನ ಮರಗಳನ್ನು ಕಡಿದಿದ್ದರು ಆಗ ನಮಗೆ ಬಹಳ ಬೇಜಾರಾಗಿತ್ತು. ಉಡುಪಿಯ ಪರ್ಯಾಯಕ್ಕೆ ಕಟ್ಟಿಗೆಯ ಅಗತ್ಯಕ್ಕಾಗಿ ಅರಣ್ಯವನ್ನು ನಿಧಾನವಾಗಿ ತೆರವುಗೊಳಿಸುತ್ತಾ ಬರಲಾಗಿದೆ. ‘ ಒಮ್ಮೆ ಕಡಿದ ಮರ-ಗಿಡಗಳು ೪-೫ ವರ್ಷಗಳ ನಂತರ ಮತ್ತೆ ಅಲ್ಲಿ ಬೆಳೆಯುತ್ತವೆ ‘ ಎಂದು ನನ್ನ ತಂದೆ ನಮಗೆ ತಿಳಿಹೇಳಿದ್ದರು. ಆದರೆ ಈ ಬಾರಿ ಬುಡಸಮೇತ ಕಿತ್ತೊಗೆದ ಆ ಮರಗಳು ಮತ್ತೊಮ್ಮೆ ಚಿಗುರಲೇ ಇಲ್ಲ – ಬೆಳೆಯಲೇ ಇಲ್ಲ !!.. ಸಂಪೂರ್ಣ ನಾಶವಾದ ಪರಿಸ್ಥಿತಿಯಲ್ಲಿದೆ ಆ ಪ್ರದೇಶ. ನನ್ನ ತಂದೆ ಅರಣ್ಯ ಬೆಳೆಯುತ್ತದೆಂದು ನನಗೆ ಹೇಳಿದಂತೆ, ನನ್ನ ಮಕ್ಕಳಿಗೆ ಮತ್ತೊಮ್ಮೆ ಕುಂಡೆಲ್ ಕಾಡು ಬೆಳೆಯುತ್ತದೆ ಎಂದು ನಾನು ಹೇಗೆ ಹೇಳಲಿ ?
ಮುಂದುವರಿಯುತ್ತಾ, ” ಸ್ವಾಮೀಜಿಗಳು ಸರಳ ಜೀವನವನ್ನು ನಡೆಸಲು ಸಾಧನವನ್ನಾಗಿ ಆಸ್ತಿಗಳನ್ನು ಬಳಸಿಕೊಳ್ಳಬೇಕು. ಆದರೆ ಅದನ್ನು ಮರೆತು ಆಸ್ತಿ ವಿಲೇವಾರಿ ಮಾಡಿದರೆ ಭವಿಷ್ಯದಲ್ಲಿ ಭೂಮಿಯೇ ಇಲ್ಲದಂತಾಗುತ್ತದೆ ಎನ್ನುವ ಕಟು ಸತ್ಯವನ್ನು ಅರಿಯಬೇಕಿದೆ. ಉಡುಪಿಯ ಬುದ್ಧಿವಂತ ಜನ ಇತರ ಪ್ರದೇಶಗಳಲ್ಲಿ ಪರಿಸರ ರಕ್ಷಣೆಯ ಕುರಿತು ಧ್ವನಿಯೆತ್ತಿ ಪ್ರತಿಭಟನೆ ನಡೆಸುತ್ತಾರೆ. ಆದರೆ ಉಸಿರಾಟಕ್ಕೆ ಸಾಕ್ಷಿಯಾಗಿ ಸೊಂಪಾಗಿ ಬೆಳೆದಿದ್ದ ಕುಂಡೆಲ್ ಕಾಡು ಕಣಿವೆ ಕಣ್ಮರೆಯಾಗಿದ್ದು , ಇದಕ್ಕಾಗಿ ಪ್ರತಿಭಟನೆ ನಡೆಸಿದ್ದ ಯಾವ ಕುರುಹುಗಳೂ ಇಲ್ಲ.” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
” ಉಡುಪಿಯ ಶ್ವಾಸಕೋಶವೇ ಕುಂಡೆಲ್ ಕಾಡು ಕಣಿವೆಯಲ್ಲಿತ್ತು. ಆದರೀಗ ಗುಡ್ಡ, ಕಾಡುಗಳನ್ನು ಕಡಿದು ಶ್ವಾಸಕೋಶವೇ ಮಾಯವಾಗಿದೆ. ಕಾಡುಗಳನ್ನು ಕಡಿಯಲು ಅರಣ್ಯ ಇಲಾಖೆ ಅದು ಹೇಗೆ ಒಪ್ಪಿಗೆ ಸೂಚಿಸಿದೆಯೋ ನನಗೆ ತಿಳಿಯದು. ನಗರ ಯೋಜನೆಯಲ್ಲಿ ಅದು ಬರುತ್ತದೆ. ಒಟ್ಟಾರೆಯಾಗಿ ಗುಡ್ಡ, ಕಾಡುಗಳನ್ನು ಕಡಿಯಲು ಒಪ್ಪಿಗೆ ಸೂಚಿಸುವಂತಿಲ್ಲ. ಈ ರೀತಿ ಒಪ್ಪಿಗೆ ಸೂಚಿಸಿರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ.” ಎಂದು ಮಾನವ ಹಕ್ಕು ಫೌಂಡೇಶನ್ ಸಂಸ್ಥಾಪಕ ರವೀಂದ್ರನಾಥ್ ಶ್ಯಾನುಭಾಗ್ ಹೇಳುತ್ತಾರೆ.
” ಪರಿಸರ ನಾಶ ಆಗಬಾರದೆಂದು ಹೇಳುವವನು ನಾನು. ಈಗ ಕುಂಡೆಲ್ ಕಾಡು ನಾಶವಾಗಿ ಜಾಗವನ್ನು ಖರೀಧಿಸಿ ಉಪಯೋಗಿಸುತ್ತಿದ್ದಾರೆ. ಈಗ ಇದರ ಬಗ್ಗೆ ಮಾತನಾಡಿದರೆ ಏನೂ ಉಪಯೋಗವಿಲ್ಲ. ಅದರಿಂದ ಸುಮ್ಮನೆ ಘರ್ಷಣೆ ಮಾತ್ರಾ.” ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕುಂಡೆಲ್ ಕಾಡು ಬಳಿಯ ಪ್ರೀಮಿಯರ್ ಎನ್ಕ್ಲೇವ್ ಕಟ್ಟಡದಲ್ಲಿ ವಾಸಿಸುತ್ತಿರುವ ಪ್ರೊ. ಪ್ರಭಾಕರ್ ಶಾಸ್ತ್ರಿಯವರು ತಮ್ಮ ಕಾಳಜಿ ಮತ್ತು ಬೇಸರ ವ್ಯಕ್ತಪಡಿಸಿದ್ದು ಹೀಗೆ, ” ಇಲ್ಲಿನ ಸೌಂದರ್ಯದ ಸೊಬಗನ್ನು ಸವಿಯುವುದಕ್ಕಾಗಿ ಈ ಪ್ಲಾಟ್ ನಲ್ಲಿ ವಾಸವಾಗಿರಲು ತೊಡಗಿದೆವು. ಆದರೆ ಇಲ್ಲಿಗೆ ಬಂದ ಒಂದೇ ವರ್ಷದಲ್ಲಿ ಪ್ರಕೃತಿ ಸೌಂದರ್ಯ ನಾಶವಾಗುತ್ತಾ ಬಂದು ದೊಡ್ಡ ದೊಡ್ಡ ಕಟ್ಟಡಗಳು ತಲಿಯೆತ್ತಿ ಈ ಕಾಡಿನಲ್ಲಿದ್ದ ವಿವಿಧ ಜಾತಿಯ ಪಕ್ಷಿ ಸಂಕುಲವೇ ನಾಶವಾಗಿ ಹೋಗಿದೆ.”
ಊರ್ಜಾದ ಸ್ಥಾಪಕ ಸದಸ್ಯೆ ಹಾಗೂ ಮಣಿಪಾಲ ನಿವಾಸಿ ಪ್ರೊ.ದಿವ್ಯಾ ಹೆಗ್ಡೆ ಪ್ರಕಾರ, ” ಇಂದ್ರಾಳಿಯಿಂದ ಮಣಿಪಾಲದವರೆಗೆ ಬರುವಾಗ ತುಂಬಾ ಖುಷಿಯಾಗುತ್ತಿತ್ತು. ರೋಡ್ ಅಗಲ ಮಾಡಲು ಶುರುವಾದ ನಂತರವೂ ಮರಕಡಿಯಲು ಒಪ್ಪಿಗೆಯಿರಲಿಲ್ಲ. ಆದರೆ ಕ್ರಮೇಣ ಮರಗಳು ನಾಶವಾಗುತ್ತಾ ಬಂತು. ಇದರಿಂದಾಗಿ ಇಲ್ಲಿನ ಪರಿಸರದ ವಾತಾವರಣಕ್ಕೆ ತೊಂದರೆಯಾಗುತ್ತದೆ. ಅತಿವೃಷ್ಠಿ-ಅನಾವೃಷ್ಠಿಗಳಾಗುತ್ತವೆ. ಮೊದಲು ಕಡಿಯಾಳಿಯಿಂದ ಮಣಿಪಾಲದವರೆಗೆ ಸ್ವಾಮೀಜಿ ಮರ ಕಡಿಯಲು ಬಿಟ್ಟಿರಲಿಲ್ಲ. ಅದು ಹೇಗೆ ಅವರ ಜಾಗದಲ್ಲ್ಲೇಅವರೇ ಮರ ಕಡಿಯಲು ಅನುಮತಿ ನೀಡಿದ್ದಾರೆಂಬುವುದು ತಿಳಿಯುತ್ತಿಲ್ಲ. ಕಾಡಿನಲ್ಲಿ ಆಯುರ್ವೇದ ಸಸ್ಯಗಳಿದ್ದವು. ಈಗ ಎಲ್ಲವೂ ನಾಶ. ಈ ದಟ್ಟ ಕಾಡನ್ನು ವಾಣಿಜ್ಯ –ವೈವಾರಿಕ ನೆಲೆಯಲ್ಲಿ ದ್ವಂಸ ಮಾಡಿರುವುದು ಯಾಕೆ ಮತ್ತು ಅದರ ಲಾಭ ಎಲ್ಲಿ ಹೋಗಿದೆಯೆಂದು ಯಾರಿಗೂ ತಿಳಿದಿಲ್ಲ.”
” ಆ ಕಾಡು ಶಿರೂರು ಮಠಕ್ಕೆ ಸೇರಿದ್ದು, ಮಠದ ರಥಕ್ಕೆ ಆ ಕಾಡಿನ ಮರಗಳನ್ನು ಉಪಯೋಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಾಡನ್ನು ಕಡಿದು ಕಟ್ಟಡಗಳನ್ನು ಕಟ್ಟಿರುವುದರಿಂದ ನೀರು ಹೋಗಲು ಜಾಗವಿಲ್ಲದಂತಾಗಿದೆ. ಸ್ವಾಮೀಜಿಗಳೇ ಪ್ರಕೃತಿಯನ್ನು ಉಳಿಸುವುದನ್ನು ಅನುಸರಿಸದೇ ಹೋದರೆ ಸಾಮಾನ್ಯ ಜನರ ಪಾಡೇನು ? ಆ ಪ್ರದೇಶದಲ್ಲಿ ಪಾರ್ಕಿಂಗಿಗೂ ಜಾಗವಿಲ್ಲದಂತಾಗಿದೆ.” ಎಂದು ಊರ್ಜಾದ ಸದಸ್ಯೆ ಅಂಬಿಕಾ ನಾಯ್ಕ್ ಹೇಳಿದ್ದಾರೆ.
ಇಂದು ಆ ಕಣಿವೆಯಲ್ಲಿ ವಾಸಿಸುತ್ತಿದ್ದ ಕಾಡು ಪ್ರಾಣಿಗಳೆಲ್ಲಾ ನಾಡಿಗೆ ಬರಲು ಪ್ರಾರಂಭಿಸಿದೆ. ಅವುಗಳಿಗೆ ನೆಲೆನಿಲ್ಲಲು ಜಾಗವೇ ಇಲ್ಲವೆಂದಾದಲ್ಲಿ ಅವುಗಳು ಎಲ್ಲಿ ನೆಲೆಸಬೇಕು ನೀವೆ ಹೇಳಿ. ಕುಂಡೆಲ್ ಕಾಡಿನಲ್ಲಿರಬೇಕಾಗಿದ್ದ ಕಾಳಿಂಗ ಸರ್ಪ ಕೆ.ಎಂ.ಸಿ ಗೆ ಬರುತ್ತಿದೆಯೆಂದರೆ ಅದು ಪರಿಸರ ನಾಶದ ಪ್ರಭಾವವೇ ಆಗಿದೆ. ಸ್ವಾರ್ಥಿ ಮಾನವ ಪರಿಸರ ಅಸಮತೋಲನಕ್ಕೆ ಕಾರಣವಾಗಿ ಅವನ ನಾಶಕ್ಕೆ ಅವನೇ ಹೊಣೆಗಾರನಾಗಿದ್ದಾನೆ.
ಬುದ್ದಿವಂತರ ಜಿಲ್ಲೆಯೆನಿಸಿಕೊಂಡ ಉಡುಪಿಯಲ್ಲಿ ಪ್ರಕೃತಿಯ ಮಾರಣ ಹೋಮ ನಡೆಯುತ್ತಿರುವಾಗ ಪರಿಸರ ಪ್ರೇಮಿಗಳು ಮತ್ತು ಬುದ್ಧಿಜೀವಿಗಳು ಯಾಕೆ ತುಟಿಕ್ ಪಿಟಿಕ್ ಎನ್ನದೆ ಸುಮ್ಮನೆ ನೋಡುತ್ತಾ ಕುಳಿತಿದ್ದಾರೆ ? ಮಣಿಪಾಲ ಹಾಗೂ ಸುತ್ತ-ಮುತ್ತಲ ಪರಿಸರ ನಾಶಗೊಂಡರೆ ನಮ್ಮೂರಿಗೆ ಯಾವ ಪರಿಣಾಮವೂ ಇಲ್ಲವೆಂಬ ಅಂಧವಿಶ್ವಾಸ ಪರಿಸರ ಪ್ರೇಮಿಗಳಲ್ಲಿದೆಯೋ ? ಅಥವಾ ಮಣಿಪಾಲಕ್ಕೂ ಉಡುಪಿಗೂ ಯಾವುದೇ ಸಂಬಂಧವಿಲ್ಲವೆಂದು ಸುಮ್ಮನಿದ್ದಾರೋ ಎಂಬುವುದು ತಿಳಿಯುತ್ತಿಲ್ಲ. ಈ ದಟ್ಟ ಕಾಡು ಕಡಿದು ಜನರಿಗೆ ಮನರಂಜನೆ ನೀಡುಲು ಕಾಂಪೆಕ್ಸ್ ಕಟ್ಟುವ ಯೋಜನೆಗೆ ಸ್ಥಳೀಯ ನಗರ ಸಭೆ ಯ ಅಧಿಕಾರಿಗಳು ಹಾಗೂ ಸರಕಾರದವರು ಅನುಮತಿ ನೀಡಿರುವುದು ಯಾವ ಸ್ವಾರ್ಥಕ್ಕಾಗಿ ಎಂದು ಕೇಳಬಹುದೇ…??
ಕುಂಡೆಲ್ ಕಾಡು – ಕಣಿವೆಯ ಬಳಿ ಸುಳಿದರೆ ಕಣಿವೆ ಸುತ್ತ ಮೇಲ್ಬಾಗದಲ್ಲಿ ದೈತ್ಯಾಕಾರವಾದ ಕಟ್ಟಡಗಳು ಹಾಗೂ ಕಣಿವೆಯಲ್ಲೂ ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಹಾಗಾದರೆ ಮನುಷ್ಯ ಎಷ್ಟೊಂದು ಸ್ವಾರ್ಥಿ ಹಾಗೂ ಲೋಭಿಯಲ್ಲವೇ ? ಆತ ಕಾಲಿಟ್ಟ ಕಡೆಯೆಲ್ಲಾ ಸರ್ವನಾಶವೆಂಬುವುದೀಗ ಜಗಜ್ಜಾಹೀರು.
ಇನ್ನು ಮುಂದೆ ಅಂತಾರಾಷ್ಟ್ರೀಯ ಸಿನಿ ಕಾಂಪ್ಲೆಕ್ಸ್ , ವಾಣಿಜ್ಯ ಮಳಿಗೆ ಗಳಿಂದ ರಾರಾಜಿಸುವ ಈ ಕುಂಡೆಲ್ ಕಾಡು ಜನಜಂಗುಳಿ ಮತ್ತು ತಾಜ್ಯದಿಂದ ತುಂಬಿ ಹೋಗಲಿದೆ…ಇಲ್ಲಿ ಪ್ರಾಣಿ- ಪಕ್ಷಿಗಳು ಮತ್ತೆ ಸ್ವಚ್ಚಂದವಾಗಿ ವಿಹರಿಸುವ ಕಾಲ ಬಂದೊದಗಬಹುದೇ ? ಮತ್ತೆ ಕಣಿವೆ ತನ್ನ ಜುಳು-ಜುಳು ಹರಿವ ಸದ್ದಿನೊಂದಿಗೆ ತನ್ನ ಹಳೆಯ ಸೌಂದರ್ಯವನ್ನು ಪ್ರಕೃತಿ ಪ್ರಿಯರಿಗೆ ತೋರಿಸಬಲ್ಲಳೇ ??