ಬೆಂಗಳೂರು: ಸಾಹಿತಿ ದಿವಂಗತ ಶಿವರಾಮ ಕಾರಂತ ಅವರ ವಿವಾಹ ‘ಗನ್ಪಾಯಿಂಟ್’ನಲ್ಲಿ ನಡೆಯಿತು ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ (ಪಾಪು) ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವುದು ಕಾರಂತರ ಅಭಿಮಾನಿಗಳನ್ನು ಕೆರಳಿಸಿದೆ.
ಪಾಪು ಅವರ ಆತ್ಮಚರಿತ್ರೆ ‘ನಾನು ಪಾಟೀಲ ಪುಟ್ಟಪ್ಪ’ ಭಾಗ 1ರಲ್ಲಿ ‘ಶಿವರಾಮ ಕಾರಂತರು ಬಹುದೊಡ್ಡ ಲೇಖಕರು.
ಅವರು ತಮ್ಮ ಜೀವನ ಚರಿತ್ರೆಯನ್ನೆಲ್ಲ ಬರೆದಿದ್ದಾರೆ. ಆದರೆ ಅದರಲ್ಲಿ ತಮ್ಮ ಮದುವೆ ಹೇಗಾಯಿತೆಂಬುದನ್ನು ಬರೆದಿಲ್ಲ. ಅದೂ ಒಂದು ಗನ್ ಪಾಯಿಂಟ್ ಮದುವೆ. ಕಾರಂತರು ಕೆ.ಟಿ. ಆಳ್ವಾ ಅವರ ಮಗಳು ಲೀಲಾಗೆ ಡಾನ್ಸ್ ಕಲಿಸಲು ಹೋಗುತ್ತಿ ದ್ದರು. ಅಚಾತುರ್ಯ ನಡೆಯಿತು. ಕೆ.ಟಿ. ಆಳ್ವಾರು ಬಂದೂಕನ್ನು ತೆಗೆದುಕೊಂಡೇ ಹೋದರು. ಮರು ಮಾತನಾಡದೆಯೇ ಕಾರಂತರು ಲೀಲಾ ಅವರನ್ನು ಮದುವೆ ಮಾಡಿಕೊಂಡರು’ ಎಂದು ಬರೆದಿದ್ದಾರೆ.
‘ಸುಪ್ರಸಿದ್ಧ ಮೂರು ಜನರ ಮದುವೆಗಳು ಗನ್‌ಪಾಯಿಂಟ್‌ನಲ್ಲಿ ನಡೆದಿರುವುದನ್ನು ಕಂಡಿರುವೆ’ ಎಂದು ಸಹ ಆರಂಭದಲ್ಲಿ ಉಲ್ಲೇಖಿಸಿದ್ದಾರೆ. ಲೋಹಿಯಾ ಪ್ರಕಾಶನ 2010ರಲ್ಲಿ ಪ್ರಕಟಿಸಿರುವ ಈ ಪುಸ್ತಕ 2014ರಲ್ಲಿ ಮರು ಮುದ್ರಣವಾಗಿದೆ.
‘ಕೀಳು ಅಭಿರುಚಿಯ ದಾಖಲೆಯೇ ಇಲ್ಲದ ಸುಳ್ಳು ಮಾಹಿತಿಯನ್ನು ಪಾಪು ಆತ್ಮಚರಿತ್ರೆಯಲ್ಲಿ ಬರೆಯುವ ಮೂಲಕ ಕಾರಂತರಿಗೆ ಅಪಮಾನ ಮಾಡಿದ್ದಾರೆ. ಕಾರಂತರ ಸಾವಿರಾರು ಅಭಿಮಾನಿಗಳಿಗೆ ಇದರಿಂದ ನೋವಾಗಿದೆ.
ಪಾಪು ಅವರು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕಾರಂತರ ಬಳಿ ಲಿಪಿಕಾರರಾಗಿದ್ದ (ಕಾಪಿಯಿಸ್ಟ್) ಉಡುಪಿಯ ಸಾಲಿಗ್ರಾಮದ ಮಾಲಿನಿ ಮಲ್ಯ ಎಚ್ಚರಿಕೆ ನೀಡಿದ್ದಾರೆ.
‘1978ರ ಅಕ್ಟೋಬರ್ 8ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೀಲಾ ಅವರ ಸಂದರ್ಶನದಲ್ಲಿ ವಿವಾಹದ ಬಗ್ಗೆ ಮಾಹಿತಿ ಇದೆ. ತಮ್ಮದು ಪರಸ್ಪರ ಪ್ರೇಮ ವಿವಾಹವಲ್ಲ ಎಂದು ಅದರಲ್ಲಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ತಾವೇ ಕಾರಂತರನ್ನು ಮೆಚ್ಚಿದ್ದಾಗಿಯೂ ಲೀಲಾ ತಿಳಿಸಿದ್ದಾರೆ. ಕಾರಂತರ ವಿವಾಹದ ಸುದ್ದಿ ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಸಹ ಪ್ರಕಟವಾಗಿದೆ’ ಎಂದರು.
ಕೇಳಿದ್ದನ್ನು ಬರೆದಿರುವೆ: ಪಾಪು
ಈ ಬಗ್ಗೆ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪಾಪು ಅವರು, ಕೇಳಿದ್ದನ್ನೇ ಬರೆದಿದ್ದೇನೆ, ಇತಿಹಾಸದ ಒಳಗೆ ಹೋಗಲು ಸಾಧ್ಯವೇ? ಇತಿಹಾಸ ಬರೆದವರು ಸಹ ತಾವು ಕೇಳಿದ್ದನ್ನೇ ಬರೆಯುತ್ತಾರೆ ಅಲ್ಲವೇ. ನಂಬಲರ್ಹ ವ್ಯಕ್ತಿಗಳು ಹೇಳಿದ್ದನ್ನು ನಾನು ಬರೆದಿದ್ದೇನೆ’ ಎಂದು ಸಮರ್ಥಿಸಿಕೊಂಡರು.
‘ಕಾರಂತರ ಬಗ್ಗೆ ನನಗೆ ಗೌರವ ಇದೆ. 1944ರಿಂದ ಅವರೊಂದಿಗೆ ಒಡನಾಟ ಇತ್ತು. ಮದುವೆಯ ಒಂದು ಘಟನೆ ಅವರ ಮೇಲಿನ ಗೌರವವನ್ನು ಕಡಿಮೆ ಮಾಡುವುದಿಲ್ಲ. ಕಾರಂತರ ಪತ್ನಿಯ ಸಹೋದರಿ ಗೀತಾ ಕುಲಕರ್ಣಿ ಅವರು ಧಾರವಾಡದಲ್ಲಿ ನೆಲೆಸಿದ್ದರು. ಅವರೊಂದಿಗೆ ಆತ್ಮೀಯ ಸಂಬಂಧ ಇತ್ತು. ಅವರು ಕೊನೆಗಾಲದಲ್ಲಿ ನನ್ನ ಬಳಿ ಮಾತನಾಡಿದ್ದರು. ‘ಅಣ್ಣ ನಿನ್ನೊಂದಿಗೆ ಒಂದು ವಿಷಯ ಹಂಚಿಕೊಳ್ಳುತ್ತೇನೆ. ತುಂಬಾ ಕಷ್ಟ ಬಂದ ಹೊತ್ತಿನಲ್ಲಿ ಮಕ್ಕಳನ್ನು ಕರೆದುಕೊಂಡು ಕಾರಂತರ ಮನೆಗೆ ಹೋಗಿ ಸಹಾಯ ಕೇಳಿದೆ, ಏನೂ ಸಹಾಯ ಮಾಡಲಾಗದು ಎಂದು ವಾಪಸ್ ಕಳುಹಿಸಿದರು’ ಎಂದು ತಿಳಿಸಿದ್ದರು. ಆದರೆ ಇಂತಹ ಹಲವು ವಿಷಯವನ್ನು ನಾನು ಬರೆಯಲು ಹೋಗಿಲ್ಲ’ ಎಂದು ಹೇಳುವ ಮೂಲಕ ವಿವಾಹ ಸಂದರ್ಭದ ಉಲ್ಲೇಖದ ಹಿಂದೆ ಯಾವುದೇ ಉದ್ದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಕೀಳು ಅಭಿರುಚಿ
‘ಕೀಳು ಅಭಿರುಚಿಯ, ದಾಖಲೆಯೇ ಇಲ್ಲದ ಸುಳ್ಳು ಮಾಹಿತಿಯನ್ನು ಪಾಪು ಆತ್ಮಚರಿತ್ರೆಯಲ್ಲಿ ಬರೆಯುವ ಮೂಲಕ ಕಾರಂತರಿಗೆ ಅಪಮಾನ ಮಾಡಿದ್ದಾರೆ. ಕಾರಂತರ ಸಾವಿರಾರು ಅಭಿಮಾನಿಗಳಿಗೆ ಇದರಿಂದ ನೋವಾಗಿದೆ. ಪಾಪು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಬೇಕು’
–ಮಾಲಿನಿ ಮಲ್ಯ