ದುಬೈ: ಐದನೇ ವರ್ಷದ ಹೊಸ್ತಿಲಲ್ಲಿರುವ ಗಲ್ಫ್ ಕನ್ನಡಿಗ ತನ್ನ ಹೊಸ ವಿನ್ಯಾಸ ತಾಣದ ಬಿಡುಗಡೆಯ ಈ ಚಾರಿತ್ರಿಕ ಮತ್ತು ಸಂಭ್ರಮದ ಸಂದರ್ಭದಲ್ಲಿ ಸಮಸ್ತ ಓದುಗರರಿಗೆ, ಗ.ಕ ಓದುಗರಿಗೆ, ಹಿತೈಷಿಗಳಿಗೆ , ಜಾಹಿರಾತುದಾರರಿಗೆ, ಬಳಗದ ವರದಿಗಾರರಿಗೆ, ಛಾಯಚಿತ್ರಗ್ರಾಹಕರಿಗೆ, ಕಛೇರಿ ಸಿಬ್ಬಂದಿ ವರ್ಗ, ತಾಣಕ್ಕೆ ಅತ್ಯುತ್ತಮ ಲೇಖನ, ಕವನ, ಚಿತ್ರಗಳನ್ನು ನೀಡುತ್ತಿರುವ ಸರ್ವ ಗೌರವಾನ್ವಿತ ಬರಹಗಾರರಿಗೆ, ಸಂಪಾದಕರಿಗೆ ಹಾಗೂ ವಿನ್ಯಾಸ ಮತ್ತು ತಾಂತ್ರಿಕ ನಿರ್ವಾಹಕರಿಗೆಲ್ಲಾ ಹೃತ್ಪೂರ್ವಕ ಅಭಿನಂದನೆಗಳು ಮತ್ತು ದನ್ಯವಾದಗಳು .
ಕೊಲ್ಲಿ ನಾಡಿನ ಅನಿವಾಸಿ ಕನ್ನಡಿಗರ ಸಿಂಹವಾಲೋಕನ
ಕೊಲ್ಲಿ ನಾಡಿಗೆ ಕರ್ನಾಟಕದಿಂದ ೧೯೬೦-೭೦ ರ ದಶಕದಲ್ಲಿ ಉದ್ಯೋಗವನ್ನು ಅರಸಿ ಬಂದ ಕನ್ನಡಿಗರು ಕೊಲ್ಲಿ ನಾಡಿನಲ್ಲಿ ಬಂದು ತಮ್ಮ ತಮ್ಮ ಬದುಕಿಗೊಂದು ನೆಲೆಯನ್ನು ಕಂಡು ಕೊಂಡರು. ಅಂದಿನ ಮರಳುಗಾಡು ಜ್ಞಾನ ವಿಜ್ಞಾನದ ಕ್ರೀಯರೂಪದ ಪರಿಕಲ್ಪನೆಗೆ ಇಂದು ಲೋಕ ವಿಖ್ಯಾತ ಅಧಿನಿಕ ನಗರವಾಗಿ ಪರಿವರ್ತನೆಯಾಗಿದೆ. ಕನ್ನಡಿಗರು ಸುದೃಡವಾದ ವಿದ್ಯಾಭ್ಯಾಸದ ತಳಹದಿಯೊಂದಿಗೆ, ಪಾದರಸದಂತೆ ಚುರುಕು ಸ್ವಭಾವ, ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯುವ ಹುಮ್ಮಸ್ಸು, ಬುದ್ದಿವಂತಿಕೆ, ಕೆಲಸದಲ್ಲಿ ಅಚ್ಚುಕಟ್ಟುತನ ಕನ್ನಡಿಗರು ಕೊಲ್ಲಿ ನಾಡಿನಲ್ಲಿ ಉನ್ನತ ಹುದ್ಧೆಯನ್ನು ಅಲಂಕರಿಸಿದರು. ಸಾಹಸಿ ಕನ್ನಡಿಗರು ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಸಾಧನೆ ಮಾಡಿದವರಾಗಿದ್ದಾರೆ.
ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಆಚಾರ ವಿಚಾರ, ಜೀವನಕ್ರಮದಲ್ಲಿ ಪರಂಪರಾಗತ ನೆಲೆಗಟ್ಟನ್ನು ಉಳಿಸಿಕೊಂಡು ಬಂದಿರುವ ಕನ್ನಡಿಗರು, ಬಾಲ್ಯದ ನೆನಪು, ಸಾಂಸ್ಕೃತಿಕ ಪ್ರಜ್ಞೆಯನ್ನು ನೆನಪಿಸಿಕೊಳ್ಳುವ ಹಬ್ಬ ಹರಿದಿನಗಳು, ಯಕ್ಷಗಾನ, ನಾಟಕ, ಬಯಲಾಟ, ಜಾನಪದ ನೃತ್ಯ, ಕ್ರೀಡೆ, ಸಂಗೀತ, ಸಾಹಿತ್ಯದಿಂದ ವಂಚಿತನಾದ ಅನುಭವ ಪ್ರತಿಯೊಬ್ಬನನ್ನು ಕಾಡುತಿತ್ತು.
ಕನ್ನಡಿಗರು ಅಂದಿನ ದಿನಗಳಲ್ಲಿ ತನ್ನವರನ್ನು ಹುಡುಕಿಕೊಂಡು ಪರಿಚಯದ ಮೂಲಕ ಸಾಂಘಿಕ ನೆಲೆಯನ್ನು ಕಂಡು ಕೊಂಡರು. ಕನ್ನಡ ಭಾಷಿಗರು ಕರ್ನಾಟಕ ಸಂಘ , ಕನ್ನಡ ಸಂಘ ಕಟ್ಟಿಕೊಂಡರು. ತುಳುವರು ತುಳುಕೂಟ ಕಟ್ಟಿದರು, ಕೊಂಕಣಿ, ಕೊಡವ, ಬ್ಯಾರಿ ಭಾಷಿಗರು ಅವರ ಭಾಷೆಯ ಸಂಘ ಕಟ್ಟಿದರು. ಜಾತಿ ಸಮುದಾಯದವರು ಸ್ವಜಾತಿ ಬಂಧುಗಳನ್ನು ಒಟ್ಟು ಮಾಡಿಕೊಂಡು ಸಂಘ ಸ್ಥಾಪನೆ ಮಾಡಿಕೊಂಡರು. ಈ ರೀತಿಯಾಗಿ ಕಳೆದ ಮೂರು ನಾಲ್ಕು ದಶಕಗಳಿಂದ ಕರ್ನಾಟಕದ ಪಂಚ ಭಾಷೆಯ ಸಂಘಟನೆಗಳು ಕಾರ್ಯೋನ್ಮುಖವಾಗಿ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬಂದರು.
ಮಾಧ್ಯಮದಿಂದ ವಂಚಿತರಾದ ಕೊಲ್ಲಿ ನಾಡಿನ ಜನತೆ…
ಹುಟ್ಟೂರಿನಲ್ಲಿ ಬೆಳಗಿನ ಸುಪ್ರಭಾತದೊಂದಿಗೆ ಬಿಸಿ ಬಿಸಿ ಕಾಫಿ ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ತಾಜಾ ಸುದ್ದಿಯನ್ನು ಹೊತ್ತ ದಿನಪತ್ರಿಕೆಗಳು, ರೇಡಿಯೊದಲ್ಲಿ ಬಿತ್ತರಿಸುತ್ತಿದ್ದ ವಾರ್ತೆಗಳು, ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ವರ್ಣರಂಜಿತ ಕನ್ನಡ ಕಾರ್ಯಕ್ರಮಗಳನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಕೊಂಡಿದ್ದ ಪ್ರತಿಯೊಬ್ಬರಿಗೂ ಕೊಲ್ಲಿನಾಡಿಗೆ ಬಂದ ನಂತರ ಭ್ರಮನಿರಸನವಾಗಿದ್ದು, ಕಹಿ ಅನುಭವವಾಗಿತ್ತು. ಎರಡು ಮೂರು ದಿನದ ಹಿಂದಿನ ವಾರ್ತಾ ಪತ್ರಿಕೆ ಕೇವಲ ಬೆರಳೆಣಿಕೆಯಷ್ಟು ಮನೆಯಲ್ಲಿ ಮಾತ್ರ ಸಂಗ್ರವಾಗುತಿತ್ತು. ಮರಳು ನಾಡಿನಲ್ಲಿ ಪ್ರತಿಧ್ವನಿಸುವ ಕನ್ನಡ ರೆಡಿಯೋ ಇಲ್ಲ. ಕನ್ನಡ ದೃಶ್ಯವಾಹಿನಿಯೂ ಲಭ್ಯವಿಲ್ಲ. ಇತ್ತಿಚಿನ ವರ್ಷಗಳಲ್ಲಿ ಕನ್ನಡ ಚಾನೆಲ್ ವೀಕ್ಷಿಸುವ ಅವಕಾಶ ದೊರೆತ್ತಿದ್ದು ಸಮಧಾನಕರ ಸಂಗತಿಯಾಗಿದೆ.
ವೀಡಿಯೋ ಕ್ಯಾಸೆಟ್ ನಲ್ಲಿ ಅಡಗಿಕುಳಿತಿರುವ ಕೊಲ್ಲಿ ನಾಡಿನ ಸಾಂಸ್ಕೃತಿಕ ವೈಭವ…
ಕೊಲ್ಲಿ ನಾಡಿನಲ್ಲಿ ಜನ್ಮತಾಳಿದ ಸಂಘಟನೆಗಳು ವಾರ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಆಹ್ವಾನ ಪತ್ರಗಳು ಅಂಚೆ ವಿಳಾಸದಾರರಿಗೆ ತಲುಪಿ, ಕಾರ್ಯಕ್ರಮಕ್ಕೆ ಬಂದು ಸೇರುತ್ತಿದ್ದರು. ಅಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳ ವಿಡೀಯೋ ಚಿತ್ರಿಕರಣದ ದಾಖಲೆಗಳು ಕಾಸೆಟ್ ಮೂಲಕ ಸದಸ್ಯರು ಸಂಗ್ರಹ ಮಾಡಿಕೊಂಡು ಊರಿಗೆ ಬರುವಾಗ ಕೊಲ್ಲಿನಾಡಿನ ವೈಭವವನ್ನು ತಮ್ಮ ಬಂದು ಮಿತ್ರರಿಗೆ ತೋರಿಸಿ ಸಂತಸಪಡುತ್ತಿದ್ದರು. ಅಂದಿನ ದಿನಗಳ ಹಲವಾರು ಅದ್ದೂರಿಯ ಕಾರ್ಯಕ್ರಮಗಳು ಕ್ಯಾಸೆಟಿನಲ್ಲಿಯೇ ಅಡಗಿ ಹೋಯಿತು.
೧೯೮೯ ರಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಗಲ್ಫ್ ವಾರ್ತಾ ಸಂಚಯ ಕಾಲಂ ಪ್ರಾರಂಭವಾಯಿತು. ವಾರಕ್ಕೆ ಒಂದು ದಿನ ಪ್ರಕಟವಾಗುತ್ತಿದ್ದ ಕೊಲ್ಲಿ ನಾಡಿನ ಸುದ್ದಿಗಳನ್ನು ಕಪ್ಪು ಬಿಳುಪು ಚಿತ್ರದೊಂದಿಗೆ ನೋಡಿ ತಮ್ಮ ಸಂತಸವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಅಂತರ್ಜಾಲ ಮಾದ್ಯಮ ಮತ್ತು ಇ ಮೈಲ್ ಗಳ ಆಗಮನದಿಂದಾದ ನಮ್ಮುರ ವೃತ್ತಪತ್ರಿಕಗಳ ಬೇಡಿಕೆ ಕಮ್ಮಿಯಾಗಿ ದಿಡೀರ್ ಸುದ್ದಿಗಳನ್ನು ಬಿತ್ತರಿಸುವ ವೆಬ್ ನಾದ್ಯಮಕ್ಕೆ ಆದ್ಯತೆ ಸಿಕ್ಕಿತು. ಇದೇ ಸರಿ ಸಮಯದಲ್ಲಿ ಗಲ್ಫ್ ವಾರ್ತಾ ಸಂಚಯದ ಆರಂಭಕ್ಕೆ ರುವಾರಿಯಾಗಿದ್ದ ಬಿ.ಜಿ.ಮೋಹನ್ ದಾಸ್ ರವರು ಇದೇ ಪುಟಕ್ಕಿರುವ ವೆಬ್ ಮಾದ್ಯಮದ ಅವಶ್ಯಕತೆಯನ್ನು ಮನಗೊಂಡು ತಮ್ಮ ಕನಸಿನ ಕಲ್ಪನೆಗಳನ್ನು ದುಬೈಯಲ್ಲಿ “ಗಲ್ಫ್ ವಾರ್ತೆ” ವೆಬ್ ತಾಣಕ್ಕೆ ಚಾಲನೆ ನೀಡಿದರು.
೨೦೦೧ ರಲ್ಲಿ “ಗಲ್ಫ್ ವಾರ್ತೆ” ಆಂಗ್ಲ ವೆಬ್ ಮಾಧ್ಯಮ ಕೊಲ್ಲಿನಾಡಿನಲ್ಲಿ ಮೂಡಿಸಿದ ಸಂಚಲನ…
೨೦೦೦ ನೂತನ ಸಹಸ್ರಮಾನದ ಕೊಡುಗೆಯಾಗಿ ’ಗಲ್ಫ್ ವಾರ್ತೆ ’ ಆಂಗ್ಲ ವೆಬ್ ಮಾಧ್ಯಮ ಯು.ಎ.ಇ.ಯಲ್ಲಿ ಪ್ರಾರಂಭವಾಯಿತು.
ಕೊಲ್ಲಿನಾಡಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ಬಗ್ಗೆ ಆಮಂತ್ರಣ, ಕಾರ್ಯಕ್ರಮದ ಚಿತ್ರ ಸಹಿತ ವರದಿ ಪ್ರಕಟವಾಗುವ ಕೊಲ್ಲಿನಾಡಿನ ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮ ಆಯೋಜಕರಿಗೆ ತಮ್ಮ ತಮ್ಮ ಕಾರ್ಯಕ್ರಮ ಸಂಪೂರ್ಣ ಚಿತ್ರ ಸಹಿತ ಪ್ರಕಟವಾಗಿರುವ ಸುದ್ದಿಯನ್ನು ನೋಡಿ ಸಂಭ್ರಮಿಸಿದರು. ಕಂಪ್ಯೂಟರ್ ಬಳಸುವ ಎಲ್ಲಾ ಅನಿವಾಸಿ ಕನ್ನಡಿಗರು ನೂತನ ವೆಬ್ ಮಾಧ್ಯಮವನ್ನು ವೀಕ್ಷಿಸುವಾಗ, ಅಂಗ್ಲ ವೆಬ್ ನಲ್ಲಿ ಕನ್ನಡ ವಿಭಾಗವನ್ನು ಸಹ ಪ್ರಾರಂಭಿಸಲಾಯಿತು. ಅಂದಿನ ದಿನಗಳಲ್ಲಿ ಕನ್ನಡ ಲಿಪಿ ಅಷ್ಟು ಸುಲಭವಾಗಿ ಉಪಯೋಗಿಸಲು ಸಾಧ್ಯವಿರಲಿಲ್ಲ. “ಯೂನಿಕೋಡ್” ಬಂದನಂತರ ಕನ್ನಡ ಸುದ್ದಿ ಪ್ರಕಟ ಸುಲಭವಾಯಿತು.
ಕೊಲ್ಲಿ ನಾಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಬಹು ನಿರೀಕ್ಷೆಯ “ಗಲ್ಫ್ ಕನ್ನಡಿಗ”೨೦೦೭ ರಲ್ಲಿ ಲೋಕಾರ್ಪಣೆ…
೨೦೦೭ ರಲ್ಲಿ ಮೂಡುಬಿದ್ರೆಯ ತರುಣ ವಿದ್ಯಾರ್ಥಿ ಅಲನ್ ಡಿ ಸೌಜ ರವರ ಅಚ್ಚ ಕನ್ನಡ ಮಾದ್ಯಮ ವಿನ್ಯಾಸವನ್ನು ಅಳವಡಿಸಿಕೊಂಡ ಗಲ್ಪ್ ವಾರ್ತೆ ’ಗಲ್ಪ್ ಕನ್ನಡಿಗ’ ಎಂದು ಮರು ನಾಮಕರಣಗೊಡಿತು.
ಕೊಲ್ಲಿನಾಡಿನ ಸಂಘ ಸಂಸ್ಥೆಯವರಿಗೆ “ಗಲ್ಫ್ ಕನ್ನಡಿಗ” ವೆಬ್ ಮಾಧ್ಯಮ ವಿಶ್ವ ಕನ್ನಡಿಗರಿಗೆ ಸುದ್ದಿ ಮುಟ್ಟಿಸುವ ಸೇತುವೆಯಾಗಿದ್ದು ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ರೂಪುಗೊಳ್ಳಿಸಲು ಉತ್ಸಾಹ ಮೂಡಿದಂತಾಯಿತು. ದಶಕಗಳಿಂದ ಅದ್ದೂರಿಯಾಗಿ ನಡೆದು ಬರುತ್ತಿದ್ದ ಕರ್ನಾಟಕ ಸಾಂಸ್ಕೃತಿಕ ವೈಭವ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ, ದುಬಾಯಿ, ಶಾರ್ಜಾ, ಅಲ್ ಐನ್, ನೆರೆಯ ರಾಷ್ಟ್ರಗಳಾದ ಬಹ್ರೆನ್, ಒಮಾನ್, ಕುವೈತ್, ಕತ್ತಾರ್, ಸೌದಿ ಅರೇಬಿಯಾದಿಂದ ಸ್ನೇಹಿತ ಮಿತ್ರರು ಗಲ್ಫ್ ಕನ್ನಡಿಗಕ್ಕೆ ಚಿತ್ರ ಸಹಿತ ಸುದ್ದಿಯನ್ನು ಮುಟ್ಟಿಸುವ ಜವಬ್ಧಾರಿಯನ್ನು ವಹಿಸಿಕೊಂಡು ಬೆಂಬಲ ನೀಡುತ್ತಿದ್ದಾರೆ. ಅಲ್ಪ ಸಮಯದಲ್ಲೆ ಗಲ್ಫ್ ಕನ್ನಡಿಗ ವಿಶ್ವದಾದ್ಯಂತ ಕನ್ನಡಿಗರು ವೀಕ್ಷಿಸುವಂತಾಗಿ ಗಲ್ಫ್ ಕನ್ನಡಿಗದ ಸಾಮಾಜಿಕ ಜವಬ್ಧಾರಿ ಹೆಚ್ಚಿಸಿಕೊಳ್ಳುವಂತಾಯಿತು.
ಗಲ್ಫ್ ಕನ್ನಡಿಗದಲ್ಲಿ ಮೂಡಿಬರುವ ಸುದ್ದಿಗಳಲ್ಲಿ ಹೊರ ದೇಶದಲ್ಲಿ ನೆಲೆಸಿರುವ ಕನ್ನಡಿಗರು ಆಚರಿಸುವ ಕನ್ನಡ ರಾಜ್ಯೋತ್ಸವ ನಡೆಯುವ ವಾಷಿಂಗ್ಟನ್, ನ್ಯೂಯಾರ್ಕ್, ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನ, ಚಿಕಾಗೋ, ಟೊರೆಂಟೋ, ನೈರೋಬಿ, ನ್ಯೂಜರ್ಸಿ, ಥೈಲ್ಯಾಂಡ್ ಕನ್ನಡ ಬಳಗ, ಮೆಲ್ಬರ್ನ್ ಕನ್ನಡ ಸಂಘ, ಲಂಡನ್ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕನ್ನಡಿಗ ಲಂಡನ್ ನಲ್ಲಿ ಮೇಯರ್ ಪದವಿ ಸ್ವೀಕಾರ ಇಂತಾಹ ಸುದ್ದಿ ಗಲ್ಫ್ ಕನ್ನಡಿಗದಲ್ಲಿ ಮೂಡಿಬರುವಾಗ ಹೊರನಾಡಿನ ಕನ್ನಡಿಗರು ಹೆಮ್ಮೆ ಪಡುವಂತಾಗಿದೆ.
ಗಲ್ಫ್ ಕನ್ನಡಿಗ ಕಂಪ್ಯೂಟರ್ ಪರದೆಯಮೇಲೆ ಮೂಡಿಬರುವ ಚಿತ್ರಸಹಿತ ಸತ್ಯ ನಿಷ್ಠೆಯ ವರದಿಗಳು, ಜ್ಞಾನಾರ್ಜನೆಯ ಹೊಸ ಲೋಕ ಅಧುನಿಕ ತಂತ್ರಜ್ಞಾನದ ಕೊಡುಗೆ, ಹತ್ತು ಹಲವು ರಂಗಗಳಲ್ಲಿಕೊಡುಗೆ ನೀಡಿದೆ. ಅದರಲ್ಲಿಯೂ ಮಾಧ್ಯಮ ಕ್ಷೇತ್ರಕ್ಕೆ ಸಂದ ಕೊಡುಗೆ ಅಪಾರವಾಗಿದೆ.
ಡಿಜಿಟಲ್ ಕ್ಯಾಮೇರಾದ ಕಣ್ಣಿನಿಂದ ಕಂಡ ಸಭೆ ಸಮಾರಂಭ ಘಟನೆಗಳಿಗೆ ಸಂಬಧಿಸಿದ ಛಾಯಾ ಚಿತ್ರ ಕ್ಷಣಾರ್ದದಲ್ಲಿ ದೈನಂದಿನ ವಿಧ್ಯಾಮಾನಗಳ ವಿಶ್ಲೇಷಣೆಯ್ಂದಿಗೆ ಆದರ್ಶದ ಮೂಲ ಚೌಕಟ್ಟನ್ನು ಮೀರದೆ ಸದಭಿರುಚಿಯ ವೀಕ್ಷಕರ ನಿರೀಕ್ಷೆಯನ್ನು ಈಡೇರಿಸುವಲ್ಲಿ ತೃಪಿಕಂಡಿದೆ.
ಗಲ್ಫ್ ಕನ್ನಡಿಗದ ಸದಾ ಕಾರ್ಯಶೀಲ ಪ್ರವೃತಿ, ಹಂತ ಹಂತವಾಗಿ ಬೆಳೆಯಲು ವೀಕ್ಷಕರ ಪ್ರೀತಿ ವಿಶ್ವಾಸ ಸಮಯೋಚಿತ ಪರಿವರ್ತನೆಗೆ ನಾಂದಿಯಾಗಿದೆ. ರಚನಾತ್ಮಕ ಸಾರ್ವಜನಿಕ ವೇದಿಕೆ “ಪ್ರತಿಸ್ಪಂದನ” ಅಧಿಕಾರಶಾಹಿಯ ತಾರತಮ್ಯದ ಅಸಡ್ಡೆಯ ವಿರುದ್ಧ ಚಾಟಿ ಏಟು ನೀಡುವ ವೇದಿಕೆಯಾಗಿದೆ.
ವೆಬ್ ಮಾಧ್ಯಮದಲ್ಲಿ ಕನ್ನಡ ಭಾಷೆಯಲ್ಲಿ ವಿಶಿಷ್ಟ ಬರಹಗಳು ಸರ್ವಕಾಲಿಕ ದಾಖಲೆಯಾಗಿದೆ. ಕೊಲ್ಲಿ ನಾಡಿನಲ್ಲಿ ಪ್ರತಿನಿತ್ಯ ಹತ್ತು ಸಾವಿರಕಿಂತಲೂ ಹೆಚ್ಚು ವೆಬ್ ತಾಣಕ್ಕೆ ಭೇಟಿ ನೀಡುತ್ತಿದ್ದು, ವಿಶ್ವಾದಾದ್ಯಂತ ಐವತ್ತು ಸಾವಿರಕಿಂತಲೂ ಹೆಚ್ಚು ವೀಕ್ಷಕರಿದ್ದಾರೆ. ಕರ್ನಾಟಕದ ರಾಜದಾನಿ ಬೆಂಗಳೂರಿನ ವಿಧಾನ ಸೌಧ ದಿಂದ ದೆಹಲಿಯ ಪಾರ್ಲಿಮೆಂಟ್ ಭವನದವರೆಗೆ ಸರ್ಕಾರಿ ಸುದ್ದಿಗಳು, ಕರ್ನಾಟಕದ ವಿವಿಧ ಭಾಗಗಳ ಸುದ್ದಿಗಳನ್ನು ಕೊಲ್ಲಿನಾಡಿನಲ್ಲಿ ಕುಳಿತು ನೋಡುವ ಅವಕಾಶ. ಕೊಲ್ಲಿನಾಡಿನ ಸಾಂಸ್ಕೃತಿಕ ವೈಭವದಲ್ಲಿ ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ತಮ್ಮ ತಮ್ಮ ಪ್ರತಿಭೆಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ ಪ್ರತಿಬೆಯ ಅನಾವರಣ ಸುದ್ದಿ ಚಿತ್ರವಾಗಿ ಗಲ್ಫ್ ಕನ್ನಡಿಗದಲ್ಲಿ ಪ್ರಕಟವಾಗಿ ಊರಿನಲ್ಲಿರುವ ಬಂಧುಮಿತ್ರರು ವೀಕ್ಷಿಸಿದಾಗ, ಸಂಭ್ರಮಿಸುವ ಅವಕಾಶವನ್ನು ಗಲ್ಫ್ ಕನ್ನಡಿಗ ಕಲ್ಪಿಸಿದೆ ಎನ್ನುವ ತೃಪ್ತಭಾವನೆಯೊಂದಿಗೆ, ಗಲ್ಫ್ ಕನ್ನಡಿಗದ ಜವಬ್ಧಾರಿಯನ್ನು ಹೆಚ್ಚಿಸಿದೆ.
ಪವಿತ್ರ ರಕ್ತದಾನ ಅಭಿಯಾನದಲ್ಲಿ ಗಲ್ಫ್ ಕನ್ನಡಿಗದ ಕೊಡುಗೆ….
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಪವಿತ್ರ ರಕ್ತದಾನ ಅಭಿಯಾನದಲ್ಲಿ ಎಲ್ಲಾ ಕರ್ನಾಟಕ ಪರ ಸಂಘಟನೆಗಳಿಗೆ ಬೆಂಬಲ ನೀಡಿ ಮಾಧ್ಯಮದ ಮೂಲಕ ರಕ್ತದಾನಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಗಲ್ಫ್ ಕನ್ನಡಿಗ ವಿಶೇಷ ಪಾತ್ರವನ್ನು ವಹಿಸುತ್ತಿದೆ.
ಜ್ಞಾನಾರ್ಜನೆಯ ಹೊಸ ಲೋಕ, ಅಂಗ್ಲ ವೆಬ್ ಮಾಧ್ಯಮದ ವೇಗ ಪ್ರಕಟಣೆಯಂತೆ, ಕನ್ನಡ ಭಾಷೆಯಲ್ಲಿ ಅಧಿಕೃತವಾಗಿ ವ್ಯವಸ್ಥಿತ ಸುದ್ದಿ ಮುಟ್ಟಿಸುವ ಸಾಹಸಕ್ಕೆ ಕೈಹಾಕಿ ಹಂತ ಹಂತವಾಗಿ ಜನ ಮೆಚ್ಚುಗೆಯ ಪಥದಲ್ಲಿ ಮುನ್ನಡೆಯುತ್ತಿರುವ ಗಲ್ಫ್ ಕನ್ನಡಿಗ ವೆಬ್ ಮಾಧ್ಯಮ ಪ್ರಧಾನ ಸಂಪಾದಕರಾದ ಶ್ರೀಯುತ ಬಿ. ಜಿ. ಮೋಹನ್ ದಾಸ್ ರವರ ಕನಸಿನ ಕಲ್ಪನೆಯ ಕೂಸು ಇಂದು ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಹೊಸ ವಿನ್ಯಾಸ ದೊಂದಿಗೆ ಮುಂದಿನ ಹೆಜ್ಜೆಯನ್ನಿಟ್ಟಿದೆ.
ಆತ್ಮೀಯರಿಗೆ “ಬೀಜಿ” ಎಂದೇ ಪರಿಚಿತರಾಗಿರುವ ಬಿ. ಜಿ. ಮೋಹನ್ ದಾಸ್ ವೈಧ್ಯಕೀಯ ರಂಗದಲ್ಲಿ ವೃತ್ತಿ ಬದುಕನ್ನು ನಡೆಸುತ್ತಿದ್ದು, ತಮ್ಮ ಅವಿಶ್ರಾಂತ ಕಾರ್ಯ ಚಟುವಟಿಕೆಗಳ ನಂತರ ದಿನ ನಿತ್ಯ ತಡರಾತ್ರಿಯವರೆಗೆ “ಗಲ್ಫ್ ಕನ್ನಡಿಗ” ವಿಶ್ವಕ್ಕೆ ಮುಟ್ಟಿಸುವ ಸಾಹಸಕ್ಕೆ ಅವರ ಸಂಗಾತಿಯಾಗಿ ಉತ್ಸಾಹಿ ದುಬೈ ತರುಣ ಅಶೋಕ ಬೆಳ್ಮಣ್ ರವರು ಅವಿರತವಾಗಿ ಸಾಥ್ ನೀಡುತ್ತಿದ್ದಾರೆ. ಇವರುಗಳ ಮತ್ತು ಗ.ಕ ಬಳಗದ , ಸಂಯಮ, ಸಾಧನೆಗೆ ಸಮಸ್ಥ ಗಲ್ಫ್ ಕನ್ನಡಿಗ ವೀಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲು ಹರ್ಷಿಸುತ್ತೇವೆ
ಗಲ್ಫ್ ಕನ್ನಡಿಗದ ಬಳಗದ ವರದಿಗಾರರು, ಛಾಯಚಿತ್ರಗ್ರಾಹಕರು, ಕಛೇರಿ ಸಿಬ್ಬಂದಿ ವರ್ಗ, ಗಲ್ಫ್ ಕನ್ನಡಿಗ ತಾಣಕ್ಕೆ ಅತ್ಯುತ್ತಮ ಲೇಖನ, ಕವನ, ಚಿತ್ರಗಳನ್ನು ನೀಡುತ್ತಿರುವ ಸರ್ವ ಗೌರವಾನ್ವಿತ ಬರಹಗಾರರಿಗೆ ಧನ್ಯವಾದಗಳು.
“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ
“ವೃತ್ತಿಯಲ್ಲಿ ಚಿತ್ರ ಶಿಲ್ಪ ಕಲಾವಿದರು, ಕ್ರೀಯಾತ್ಮಕ ಕಲಾನಿರ್ದೇಶಕರು, ಪ್ರವೃತ್ತಿಯಲ್ಲಿ ಸಂಘಟಕರು, ಬರಹಗಾರರು, ಉತ್ತಮ ವಾಗ್ಮಿ, ಕೊಲ್ಲಿ ನಾಡಿನಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಹಸಿರಾಗಿರಿಸುವಲ್ಲಿ ಕಳೆದ ಎರಡು ದಶಕಗಳಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರು. ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀ ಬಿ. ಕೆ. ಗಣೇಶ್ ರೈ ಯವರು ಯು.ಎ.ಇ. ಯಲ್ಲಿ ರಕ್ತದಾನ ಅಭಿಯಾನದಲ್ಲಿ ಜಾಗೃತಿ ಮೂಡಿಸುತ್ತಾ, ಗಲ್ಫ್ ಕನ್ನಡಿಗದ ಪ್ರಾರಂಭದ ದಿನದಿಂದ ಕನ್ನಡ ಭಾಷೆಯ ಮೇಲಿರುವ ಅಪಾರ ಪ್ರೀತಿಯಿಂದ ಹಲವಾರು ಲೇಖನಗಳು, ಗಣ್ಯರ, ಕಲಾವಿದರ ಸಂದರ್ಶನ, ವಿಶೇಷ ಸುದ್ದಿ ಪ್ರಕಟಣೆಯಲ್ಲಿ ಬೆಂಬಲ ನೀಡುತ್ತಿರುವ ಆತ್ಮೀಯ ಮಿತ್ರ ರೈಯವರಿಗೆ ಗಲ್ಫ್ ಕನ್ನಡಿಗ ಸರ್ವರ ಪರವಾಗಿ ಅಭಿನಂದನೆಗಳು”
ಬಿ. ಜಿ. ಮೋಹನ್ ದಾಸ್
ಸ್ಥಾಪಕ ಮತ್ತು ಮುಖ್ಯಸ್ಥ
{Posted on 9th Sept 2012}