ಬೆಂಗಳೂರು, ನ.8: ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣದಲ್ಲಿ ತಂದೆಯಾಗಿ ಕೆಲವು ವಿಚಾರಗಳಲ್ಲಿ ನನ್ನ ನಿರ್ಲಕ್ಷ್ಯವಿದ್ದು, ಇದನ್ನು ಸಹಜವಾಗಿಯೇ ಒಪ್ಪಿಕೊಳ್ಳುತ್ತೇನೆ ಎಂದು ಆಕೆಯ ತಂದೆ ಕೃಷ್ಣಮೂರ್ತಿ ಪೂಜಾರಿ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗಳು ಅಪಹರಣವಾದ ಸುದ್ದಿ ತಿಳಿದ ತಕ್ಷಣ ಪೊಲೀಸರಿಗೆ ದೂರು ನೀಡಬೇಕಾಗಿತ್ತು. ಅಪಹರಣ ಮಾಡಿದವರ ಮಾಹಿತಿಯನ್ನು ಪೊಲೀಸರಿಗೆ ತಿಳಿಸಬೇಕಾಗಿತ್ತು. ಈ ವಿಚಾರದಲ್ಲಿ ತಂದೆಯಾಗಿ ನಿರ್ಲಕ್ಷ್ಯ ತೋರಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅವರ ಮಾತುಗಳು ಹಲವು ವಿರೋಧಾಭಾಸಗಳನ್ನು ಹೊಂದಿದ್ದು, ಹೆಚ್ಚಿನ ಪ್ರಶ್ನೆಗಳಿಗೆ ಅವರಲ್ಲಿ ಯಾವುದೇ ಉತ್ತರಗಳು ಇರಲಿಲ್ಲ. ಅಪಹರಣ ಮಾಡಿ ವಿಷಕುಡಿಸಿದರು ಎಂದು ಮಗಳು ಹೇಳಿಕೆ ನೀಡಿದ್ದಾಳೆ ಎಂದು ಹೇಳಿದ ಕೃಷ್ಣ ಪೂಜಾರಿ ತಕ್ಷಣವೇ ಯಾಕೆ ವೈದ್ಯರಿಗೆ ತೋರಿಸಲಿಲ್ಲ ಎಂಬ ಪ್ರಶ್ನೆಗೆ ಅಸ್ಪಷ್ಟ ಉತ್ತರವನ್ನು ನೀಡಿದರು. ಪ್ರಕರಣ ನಡೆದು ಒಂದು ವಾರ ಕಳೆದಿದೆ. ಆದರೆ, ಪೊಲೀಸರು ಯಾವ ರೀತಿ ದೂರು ದಾಖಲಿಸಿದ್ದಾರೆ? ಎಫ್‌ಐಆರ್‌ನಲ್ಲಿ ಏನಿದೆ? ಎನ್ನುವ ಮಾಹಿತಿ ತಮಗೆ ಗೊತ್ತಿದೆಯೇ, ಇನ್ನು ನಂದಿತಾ ಯಾವ ಕಾರಣಕ್ಕೆ ಮೃತಪಟ್ಟಿದ್ದಾಳೆ ಎನ್ನುವ ವೈದ್ಯಕೀಯ ವರದಿಯನ್ನು ಅವರು ಪಡೆದಿದ್ದಾರೆಯೇ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು.
ಯಾಕೆ ಎನ್ನುವ ಪ್ರಶ್ನೆಗೆ ವೈದ್ಯಕೀಯ ವರದಿಯ ಮಾಹಿತಿ ಮಾಧ್ಯಮಗಳಲ್ಲೇ ಬಿತ್ತರಗೊಂಡಿದೆ. ಹೀಗಾಗಿ ವರದಿ ಪಡೆಯುವ ಗೊಡವೆಗೆ ಹೋಗಲಿಲ್ಲ ಎಂದು ಕೃಷ್ಣಮೂರ್ತಿ ಹೇಳಿದರು. ಎಫ್‌ಐಆರ್‌ನಲ್ಲಿ ಎಷ್ಟು ಮಂದಿ ಆರೋಪಿಗಳನ್ನು ಹೆಸರಿಸಲಾಗಿದೆ ಎನ್ನುವ ಪ್ರಶ್ನೆಗೂ ಅವರಿಂದ ಸೂಕ್ತ ಉತ್ತರ ಬರಲಿಲ್ಲ.
ನನ್ನ ಮಗಳ ಶಾಲಾ ಸಹಪಾಠಿಯ ಸಹೋದರ ಸುಹಾನ್ ಎನ್ನುವ ಹುಡುಗ ನನ್ನ ಮಗಳನ್ನು ಅಪಹರಿಸಿದ್ದನು. ಜತೆಗೆ ಇನ್ನೂ ಇಬ್ಬರು ಆರೋಪಿಗಳು ಇದ್ದರು. ಅವರೇ ಇದಕ್ಕೆಲ್ಲ ಕಾರಣ. ಅವರನ್ನು ಪೊಲೀಸರು ಮೊದಲು ನನಗೆ ತೋರಿಸಿ ಬಂಧಿಸಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು.
ಹಾಗಾದರೆ ನಿಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದೆಯೇ? ಎನ್ನುವ ಪ್ರಶ್ನೆಗೆ, ಅಂತಹ ಪ್ರಯತ್ನ ನಡೆದಿತ್ತು. ಆದರೆ ಅದು ವಿಫಲಗೊಂಡಿದೆ. ನನ್ನ ಮಗಳ ಬಾಯಿಗೆ ಬಟ್ಟೆ ತುರುಕಿ ಕಾರಿನಲ್ಲಿ ಸುಹಾನ್ ಅಪಹರಣ ಮಾಡಿದ್ದಾನೆ. ನಂತರ ಮಗಳ ಬಾಟಲಿಯಲ್ಲಿ ಇದ್ದ ನೀರನ್ನು ಸ್ವಲ್ಪ ಹೊರಗೆ ಚೆಲ್ಲಿ ನೀರಿನಲ್ಲಿ ಏನೋ ಮಿಶ್ರಣ ಮಾಡಿ ಕುಡಿಸಿದ್ದಾನೆ. ಇದು ರಾತ್ರಿಯ ನಂತರ ಸಮಸ್ಯೆಗೆ ಕಾರಣವಾಗಿದೆ. ತನ್ನ ಮಗಳು ರಾತ್ರಿ ಪೂರ್ತಿ ವಾಂತಿ ಮಾಡಿಕೊಂಡಿದ್ದಾಳೆ. ಇದು ಪಿತ್ತದಿಂದ ಆಗಿರುವ ವಾಂತಿ ಎಂದು ಸುಮ್ಮನಾದೆವು. ಬೆಳಗ್ಗೆ ತೀರ್ಥ ಹಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅನಂತರ ಮೆಗ್ಗಾನ್‌ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರು ವಿವರಿಸಿದರು.
ಅಪಹರಣದ ನಂತರ ಅವರು ಮಗಳಿಗೆ ಹೊಡೆದರೇ, ಬೈದರೆ ಎನ್ನುವ ಪ್ರಶ್ನೆಗೆ, ಆಕೆ ತನ್ನ ಮುದ್ದಿನ ಮಗಳು. ಆಕೆಯನ್ನು ಯಾವತ್ತೂ ಬೈದಿಲ್ಲ, ಹೊಡೆದಿಲ್ಲ ಕೃಷ್ಣ ಪೂಜಾರಿ ಎಂದವರು ಉತ್ತರಿಸಿದರು.
ಕೃಷ್ಣಮೂರ್ತಿ ಪೂಜಾರಿ ಹೇಳಿದುದಿಷ್ಟು: ‘‘ನಂದಿತಾ ಅಕ್ಟೋಬರ್ 29ರಂದು ತೀರ್ಥಹಳ್ಳಿಯ ನನ್ನ ಕಿರಾಣಿ ಅಂಗಡಿಯಿಂದ ಬೆಳಗ್ಗೆ 9:05 ಗಂಟೆಗೆ ಶಾಲೆಗೆ ಹೊರಟಳು. ಅಲ್ಲಿಂದ ಹತ್ತು ನಿಮಿಷಕ್ಕೆ ಸರಿಯಾಗಿ ತೀರ್ಥಹಳ್ಳಿಯ ಬಸ್ ನಿಲ್ದಾಣ ತಲುಪಿದ್ದಾಳೆ. ಅಲ್ಲಿಂದ ಆಕೆಯನ್ನು ಅಪಹರಿಸಲಾಗಿದೆ’’ .
‘‘ತೀರ್ಥಹಳ್ಳಿಯಿಂದ ಐದಾರು ಕಿಲೋಮೀಟರ್ ದೂರ ಇರುವ ಗುಡ್ಡದ ಮೇಲೆ ನಂದಿತಾ ಅಳುತ್ತಾ ಇರುವುದನ್ನು ಕಂಡ ಅಲ್ಲಿದ್ದ ಅಜ್ಜಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ನೀರು ಕುಡಿಸಿ ತಿಂಡಿ ಕೊಟ್ಟು ನನಗೆ ದೂರವಾಣಿ ಕರೆ ಮಾಡಿದಾಗ ತಕ್ಷಣವೇ ಅಲ್ಲಿಗೆ ತೆರಳಿದೆ. ಆಗ ಮಧ್ಯಾಹ್ನ 12 ಗಂಟೆ ಆಗಿತ್ತು’’
‘‘ಅನಂತರ ಮನೆಗೆ ಕರೆದುಕೊಂಡು ಬಂದೆ. ನನ್ನ ಮಗಳು ಒಂದು ರೀತಿ ಗಾಬರಿಯಲ್ಲಿದ್ದಳು. ಅನಂತರ ಯಾರೋ ತನ್ನನ್ನು ಅಪಹರಿಸಿ ನೀರಿನಲ್ಲಿ ಏನೋ ಮಿಶ್ರಣ ಮಾಡಿ ಕುಡಿಸಿದರು ಎಂದು ಹೇಳಿದಳು. ಕಾರಿನಲ್ಲಿ ತನಗೆ ಹಿಂಸೆ ನೀಡಿದರು ಎಂದು ಸಹ ಹೇಳಿದಳು. ನನಗೆ ಹೇಳಿದ ವಿಚಾರವನ್ನೇ ನನ್ನ ಪತ್ನಿಗೂ ತಿಳಿಸಿದ್ದಾಳೆ’’
‘‘ಆಗ ನನ್ನ ಪತ್ನಿಗೆ, ಏನಾಗಿದೆ ನೋಡು ಎಂದು ಹೇಳಿದೆ. ಆಕೆ ನಂದಿತಾಗೆ ಸ್ನಾನ ಮಾಡಿಸಿ ಎಲ್ಲವನ್ನೂ ಪರಿಶೀಲಿಸಿ ಅತ್ಯಾಚಾರ ನಡೆದಿಲ್ಲ. ಅಂತಹ ಪ್ರಯತ್ನ ಆಗಿದೆ ಎಂದು ಹೇಳಿದಳು. ಆಗ ನನ್ನ ಪತ್ನಿಗೆ ಮಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚಿಸಿದೆ. ಮಗಳು ನನ್ನ ಕೊನೆಯ ಪುತ್ರಿ 11 ತಿಂಗಳ ನಿಧಿ ಜೊತೆ ಸಂತೋಷದಿಂದ ಆಟವಾಡುತ್ತಿದ್ದುದನ್ನು ನೋಡಿದೆ’’
‘‘ರಾತ್ರಿಯವರೆಗೂ ಆಕೆ ಸಹಜವಾಗಿಯೇ ಇದ್ದಳು. ರಾತ್ರಿ ಊಟ ಮಾಡಿದ ನಂತರ ವಾಂತಿ ಮಾಡಿಕೊಳ್ಳಲಾರಂಭಿಸಿದಳು. ಇದು ಪಿತ್ತದಿಂದ ಆಗಿರುವ ವಾಂತಿ ಇರಬೇಕು ಎಂದು ಸುಮ್ಮನಾದೆ. ಆದರೆ, ಪ್ರತಿ ಗಂಟೆಗೊಮ್ಮೆ ವಾಂತಿ ಮಾಡಿಕೊಳ್ಳುತ್ತಲೇ ಇದ್ದಳು. ಕೊನೆಗೆ ಏನೋ ಸಮಸ್ಯೆಆಗಿರಬೇಕು ಎಂದುಕೊಂಡು ಬೆಳಗ್ಗೆ 5 ಗಂಟೆಗೆ ತೀರ್ಥಹಳ್ಳಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆಕೆಗೆ ಗ್ಲುಕೋಸ್‌ಡ್ರಿಪ್ ಹಾಕಿ ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಮಧ್ಯಾಹ್ನ 2 ಗಂಟೆಗೆ ಮೆಗ್ಗಾನ್‌ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಐಡಿ ಅಧಿಕಾರಿಗಳಿಗೂ ಸಹ ಈ ವಿಚಾರವನ್ನು ತಿಳಿಸಿದ್ದೇನೆ’’
‘‘ನಮಗೆ ಸರಿಯಾಗಿ ವೈದ್ಯರು ಸಿಗಲಿಲ್ಲ. ಆಗ ವೈದ್ಯರ ಮುಷ್ಕರ ನಡೆಯುತ್ತಿತ್ತು’’ ಎಂದು ಕೃಷ್ಣ ಮೂರ್ತಿ ಹೇಳಿದಾಗ, ವೈದ್ಯರ ಮುಷ್ಕರ ಮುಗಿದಿತ್ತು. ವೈದ್ಯರು ಕರ್ತವ್ಯದ ಮೇಲಿದ್ದರು ಎಂಬುದನ್ನು ಅವರ ಗಮನಕ್ಕೆ ತಂದಾಗ, ತಮಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಮಗಳು ಮನೆಯಲ್ಲಿ ಏನಾದರೂ ಕುಡಿದಿದ್ದಳೇ ಎನ್ನುವ ಪ್ರಶ್ನೆಗೆ, ‘‘ನಾವು ಕೃಷಿಕರಲ್ಲ. ಕೃಷಿಕರಾಗಿದ್ದರೆ ನಮ್ಮ ಮನೆಯಲ್ಲಿ ಕೀಟ ನಾಶಕಗಳು ಇರುತ್ತಿದ್ದವು. ಮನೆಯಲ್ಲಿ ಯಾವುದೇ ವಿಷ ಇರಲಿಲ್ಲ. ಅಲ್ಲದೆ ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಈ ಘಟನೆಗೆ ಮಗಳನ್ನು ದೂಷಿಸುವುದು ಸರಿಯಲ್ಲ’’ ಎಂದು ಅವರು ಹೇಳಿದರು.
ಮಗಳ ಅಪಹರಣದ ಬಗ್ಗೆ ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ? ಎನ್ನುವ ಪ್ರಶ್ನೆಗೆ, ‘‘ಮಗಳ ಭವಿಷ್ಯಕ್ಕೆ ಚ್ಯುತಿಯಾಗುತ್ತದೆ ಎನ್ನುವಕಾರಣಕ್ಕೆ ನನ್ನ ಪತ್ನಿ ದೂರು ನೀಡುವುದು ಬೇಡ ಎಂದು ಹೇಳಿದಳು. ಹೀಗಾಗಿ ದೂರು ನೀಡಲಿಲ್ಲ’’ ಎಂದು ಪೂಜಾರಿ ತಮ್ಮ ಸಮರ್ಥಿಸಿಕೊಂಡರು.
‘‘ಮಗಳು ಬರೆದಿರುವ ಪತ್ರ ನನಗೆ ಸಿಗಲಿಲ್ಲ. ಟಿವಿ9 ಸಿಬ್ಬಂದಿ ಸಹ ಪರಿಶೀಲನೆ ನಡೆಸಿದರು. ಅವರಿಗೂ ಅದು ಸಿಕ್ಕಿರಲಿಲ್ಲ. ಎರಡು ಗಂಟೆಯ ನಂತರ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿರುವ ವಿಚಾರಗಳು ಗೊಂದಲ ಸೃಷ್ಟಿಸುತ್ತವೆ. ಜೊತೆಗೆ ಅದು ಆಕೆಯ ಕೈ ಬರಹವಲ್ಲ. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಏನು ಹೇಳಿದೆ ಎನ್ನುವುದು ನನಗೆ ಗೊತ್ತಿಲ್ಲ’’ ಎಂದವರು ತಿಳಿಸಿದರು.
ಮಗಳು ಅಸ್ವಸ್ಥಳಾದ ಸಂದರ್ಭದಲ್ಲಾದರೂ ಪೊಲೀಸರಿಗೆ ದೂರು ನೀಡಬಹುದಿತ್ತಲ್ಲ? ಎನ್ನುವ ಪ್ರಶ್ನೆಗೆ ‘‘ನನಗೆ ಆಗ ಈ ವಿಚಾರ ಹೊಳೆಯಲಿಲ್ಲ. ಏನು ಮಾಡಬೇಕೆಂದು ತೋಚಲಿಲ್ಲ’’ ಎಂದು ಕೃಷ್ಣ ಮೂರ್ತಿ ಹೇಳಿದರು.
‘‘ಪೊಲೀಸರು ತೃಪ್ತಿದಾಯಕವಾಗಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಾಸ್ತವ ಸಂಗತಿ ತಿಳಿಸಲು ಬೆಂಗಳೂರಿಗೆ ಬಂದಿದ್ದೇನೆ. ಅವರು ಸಿಗದಿದ್ದರೆ ಅವರ ಕಚೇರಿಗೆ ಪತ್ರವೊಂದನ್ನು ನೀಡಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿ ಮೊದಲು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತೇನೆ’’ ಎಂದು ಅವರು ತಿಳಿಸಿದರು.
-http://vbnewsonline.com