ಪ್ರಮುಖ ವರದಿಗಳು

ಐವರು ಕಾಂಗ್ರೆಸ್ ಶಾಸಕರ ಅಮಾನತು; ಮೊದಲ ದಿನವೇ ಕಾಂಗ್ರೆಸ್‌ಗೆ ಮಹಾರಾಷ್ಟ್ರ ರಾಜ್ಯಪಾಲ ಶಾಕ್

Pinterest LinkedIn Tumblr

mla-suspended

ಮುಂಬೈ: ನೂತನವಾಗಿ ರಚನೆಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹರಿಭಾವ್ ಬಾಗ್ಡೆ, ಕಾಂಗ್ರೆಸ್‌ನ ಐವರು ಶಾಸಕರನ್ನು ಅಮಾನತುಗೊಳಿಸಿದ್ದಾರೆ.

ವಿಶ್ವಾಸಮತ ಯಾಚನೆ ವೇಳೆ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಐದು ಮಂದಿ ಕಾಂಗ್ರೆಸ್ ಶಾಸಕರನ್ನು 2 ವರ್ಷಗಳ ಅವಧಿಗೆ ಅಮಾನತು ಮಾಡಲಾಗಿದೆ.

ರಾಜ್ಯಪಾಲರ ವಿರುದ್ದ ಅಸಭ್ಯ ವರ್ತನೆ ತೋರಿದ ಕಾಂಗ್ರೆಸ್‌ನ 12 ಶಾಸಕರನ್ನು ಅಮಾನತುಗೊಳಿಸುವಂತೆ ಸ್ಪೀಕರ್ ಹರಿಬಾರು ಬಾಗ್ಡೆ ಅವರಿಗೆ ಬಿಜೆಪಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಐವರು ಶಾಸಕರನ್ನು 2 ವರ್ಷಗಳ ಕಾಲ ಅಮಾನತು ಮಾಡಲಾಗಿದೆ.

ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಬಹಮತ ಸಾಬೀತಿಗಾಗಿ ಧ್ವನಿ ಮತದ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಬಿಜೆಪಿ ಧ್ವನಿ ಮತದ ಆಧಾರದ ಮೇಲೆ ಗೆಲುವು ಸಾಧಿಸಿತು. ಈ ಮಧ್ಯೆ ಉದ್ರೇಕಿತಗೊಂಡ ಕಾಂಗ್ರೆಸ್ ಶಾಸಕರು ಧ್ವನಿ ಮತದಾನವು ನ್ಯಾಯಸಮ್ಮತದಿಂದ ಕೂಡಿಲ್ಲ, ಆದ್ದರಿಂದ ಮರುಮತದಾನ ಮಾಡುವಂತೆ ಸ್ಪೀಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸದನದಲ್ಲಿ ಪ್ರತಿಭಟನೆ ನಡೆಸಿ ಗದ್ದಲ ಎಬ್ಬಿಸಿದ್ದರು.

ರಾಹುಲ್ ಬೋಂದ್ರೆ, ಅಬ್ದುಲ್ ಸತ್ತರ್, ವೀರೇಂದ್ರ ಜಗತಾಪ್, ಅಮರ್ ಕಾಳೆ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಹರಿಭಾವ್ ಬಾಗ್ಡೆ ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡಿರುವ ಶಾಸಕರು ಸ್ಪೀಕರ್ ಅವರ ಈ ನಿರ್ಧಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಜಾಪ್ರಭುತ್ವ ನೆಲೆಯಲ್ಲಿ ಸದನದಲ್ಲಿ ಹೋರಾಟ ಮಾಡಿದ್ದೇವೆ. ತಮ್ಮ ಮೇಲೆ ವಿನಾ ಕಾರಣ ಬಿಜೆಪಿ ಕೆಂಗಣ್ಣು ಬೀರುತ್ತಿದೆ’ ಎಂದು ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

Write A Comment