ಪ್ರಮುಖ ವರದಿಗಳು

ಎಲುಬಿಲ್ಲದ ನಾಲಿಗೆ, ಕೀಳುಮಟ್ಟದ ಹೇಳಿಕೆ: ತೇಜಸ್ವಿನಿಗೆ ಉಮಾಶ್ರೀ ತಿರುಗೇಟು; ಕಾಂಗ್ರೆಸ್ ಮಹಿಳಾ ಪೀಡಕರಿದ್ದಾರೆ ಎಂದಿದ್ದ ತೇಜಸ್ವಿನಿ ವಿರುದ್ಧ ಸಚಿವೆ ಉಮಾಶ್ರೀ ಕೆಂಡಾಮಂಡಲ

Pinterest LinkedIn Tumblr

Umashree-Tejaswini

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕುರಿತು ಮಾಜಿ ಸಂಸದೆ ತೇಜಸ್ವಿ ರಮೇಶ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಉಮಾಶ್ರೀ ಅವರು ಕೆಂಡಾಮಂಡಲರಾಗಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದ ತೇಜಸ್ವಿನಿ ರಮೇಶ್ ಅವರು, ಕಾಂಗ್ರೆಸ್‌ನಲ್ಲಿ ದುಶ್ಸಾಸನರಿದ್ದು, ಮಹಿಳೆಯರನ್ನು ಕೇವಲ ಒಂದು ವಸ್ತುವಿನಂತೆ ಬಳಸಿಕೊಳ್ಳುತ್ತಾರೆ. ಅಲ್ಲಿ ಸುಂದರವಾಗಿದ್ದು, ಅವರು ಹೇಳಿದಂತೆ ನಡೆದುಕೊಳ್ಳುವ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿ ಸ್ಥಾನಮಾನ ನೀಡುತ್ತಾರೆ ಎಂದು ಹೇಳಿದ್ದರು. ತೇಜಸ್ವಿನಿ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರ ನಡುವೆ ಪರಸ್ಪರ ಜಟಾಪಟಿಗೆ ಕಾರಣವಾಗಿದೆ.

ತೇಜಸ್ವಿನಿ ಅವರ ಹೇಳಿಕೆ ಸಂಬಂಧ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಉಮಾಶ್ರೀ ಅವರು, ‘ತೇಜಸ್ವಿನಿ ಅವರ ಹೇಳಿಕೆ ಅಸಹ್ಯಕರವಾಗಿದ್ದು, ಎಲುಬಿಲ್ಲದ ನಾಲಗೆಯನ್ನು ಎಲ್ಲೆಂದರಲ್ಲಿ ಹರಿಬಿಡಬಾರದು. ಕಾಂಗ್ರೆಸ್ ಪಕ್ಷದ ಮಹಿಳೆಯರ ಕುರಿತಂತೆ ತೇಜಸ್ವಿನಿ ಅವರು ನೀಡಿರುವ ಹೇಳಿಕೆ ಅತ್ಯಂತ ಅವಮಾನಕರವಾಗಿದ್ದು, ಮಹಿಳೆಯರು ರಾಜಕೀಯ ಪ್ರವೇಶಿಸದಂತೆ ತಡೆಯುವ ಹುನ್ನಾರವಾಗಿದೆ. ಮಹಿಳೆಯರ ವಿರುದ್ಧ ಅವಮಾನಕಾರಿಯಾಗಿ ಹೇಳಿಕೆ ನೀಡಿರುವ ತೇಜಸ್ವಿನಿ ರಮೇಶ್ ಅವರು ಈ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

‘ತೇಜಸ್ವಿನಿ ರಮೇಶ್ ಅವರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, ಸಂಸದೆಯಾಗಿ ಅಧಿಕಾರ ಅನುಭವಿಸಿದ್ದಾರೆ. ಇದೀಗ ಪಕ್ಷವನ್ನು ಬಿಟ್ಟು ಬಿಜೆಪಿ ತೆರಳಿ ಅದೇ ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವು ದಶಕಗಳಿಂದ ಸೇವೆ ಸಲ್ಲಿಸಿದ್ದೇನೆ. ದಿನದ 24 ಗಂಟೆಯೂ ಪುರುಷರೊಂದಿಗೆ ಕೆಲಸ ಮಾಡಿದ್ದೇನೆ. ಇದುವರೆವಿಗೂ ನನಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಪಕ್ಷದಲ್ಲಿ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಮೆಚ್ಚಿ ಪಕ್ಷ ನನಗೆ ಸಚಿವ ಸ್ಥಾನ ನೀಡಿದೆ. ಆದರೆ ತೇಜಸ್ವಿನಿ ಅವರ ಹೇಳಿಕೆಯಿಂದ ಸಮಾಜಕ್ಕೆ ರಾಜಕೀಯ ಕುರಿತು ಕೆಟ್ಟ ಸಂದೇಶ ರವಾನೆಯಾಗುತ್ತಿದೆ.

ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ತೂಗುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಯಾರು ಕಿರುಕುಳ ನೀಡಿದ್ದಾರೆ ಎಂಬುದನ್ನು ತೇಜಸ್ವಿನಿ ಅವರು ಮೊದಲು ಬಹಿರಂಗಗೊಳಿಸಲಿ. ಈ ಕುರಿತು ಅವರೊಂದಿಗೆ ನಾನು ಬಹಿರಂಗ ಚರ್ಚೆಗೆ ಸಿದ್ಧವಿದ್ದು, ಯಾವುದೇ ಸಂದರ್ಭದಲ್ಲಿಯೂ ಚರ್ಚಿಸಲು ಸಿದ್ಧಳಿದ್ದೇನೆ ಎಂದು ಸಚಿವೆ ಉಮಾಶ್ರೀ ಸಾವಲೆಸೆದಿದ್ದಾರೆ.

Write A Comment