ತಾಲೂಕಿನ ಪಂಡರವಳ್ಳಿಯಲ್ಲಿ ಶನಿವಾರ ಮಹಿಳೆಯೊಬ್ಬರನ್ನು ಕೊಂದುಹಾಕಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
6ರಿಂದ 7 ವರ್ಷ ಪ್ರಾಯದ ಗಂಡು ಹುಲಿ ಇದಾಗಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಇಲ್ಲವೇ ಮೈಸೂರು ಮೃಗಾಲಯಕ್ಕೆ ಸಾಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ನರಭಕ್ಷಕ ಹುಲಿ ಸೆರೆಯಾಗಿರುವುದರಿಂದ ಪಂಡರವಳ್ಳಿ ಸುತ್ತಮುತ್ತಲಿನ ಗ್ರಾಮದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಚಂದ್ರದ್ರೋಣ ಪರ್ವತ ಶ್ರೇಣಿಯ ಅತ್ತಿಗುಂಡಿ, ಪಂಡರವಳ್ಳಿ, ಕೃಷ್ಣಗಿರಿ ಎಸ್ಟೇಟ್ ಮತ್ತಿತರ ಕಡೆಗಳಲ್ಲಿ ಪದೇಪದೆ ಹುಲಿ ಕಾಣಿಸಿಕೊಳ್ಳುತ್ತಿತ್ತು. ಇಷ್ಟಾದರೂ ಅರಣ್ಯ ಇಲಾಖೆ ಹುಲಿಯನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಲು ಮುಂದಾಗಿರಲಿಲ್ಲ. ಆದರೆ, ನ.15ರಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಪಂಡರವಳ್ಳಿಯ ಸುಮಿತ್ರ ಹುಲಿಗೆ ಬಲಿಯಾಗುತ್ತಿದ್ದಂತೆ ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ ಹೊತ್ತಿಗೆ ಹುಲಿ ಹಿಡಿಯಲು ಬೋನು ತರಿಸಿಟ್ಟು, ರ‌್ಯಾಪಿಡ್ ರೆಸ್ಪಾನ್ಸ್ ಯೂನಿಟ್‌ನೊಂದಿಗೆ ಕಾರ‌್ಯಾಚರಣೆ ಆರಂಭಿಸಿದ್ದರು. ಶನಿವಾರ ರಾತ್ರಿ ಬೋನಿನ ಸಮೀಪದಲ್ಲೇ ಎರಡು ದನಗಳನ್ನು ಕೊಂದಿದ್ದ ಇದೇ ಹುಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿತ್ತು.
ಭಾನುವಾರ ಬೆಳಗ್ಗೆ ಪುನಃ ಕಾರ‌್ಯಾಚರಣೆ ಆರಂಭಿಸಿ ಸ್ಥಳದಲ್ಲಿ ಅಳವಡಿಸಿದ್ದ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಹುಲಿ ಅಲ್ಲಿಯೇ ಸುತ್ತಾಡಿರುವುದು ಕಂಡುಬಂದಿತ್ತು. ಭಾನುವಾರ ಸಂಜೆವರೆಗೂ ಕಣ್ಣಿಗೆ ಬೀಳದೆ ಸತಾಯಿಸಿದ್ದ ಹುಲಿ ಸಂಜೆ 6.30ಕ್ಕೆ ಕತ್ತಲಾಗುತ್ತಿದ್ದಂತೆ ಹಿಂದಿನ ದಿನ ಕೊಂದಿದ್ದ ದನವನ್ನು ತಿಂದು ಪುನಃ ತಪ್ಪಿಸಿಕೊಂಡಿತ್ತು. ರಾತ್ರಿ 8.30ರವರೆಗೂ ನಡೆದ ಕಾರ‌್ಯಾಚರಣೆ ವಿಫಲವಾಗಿತ್ತು.
ಎರಡು ದಿನದಿಂದ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ನಿರಂತರ ಶ್ರಮಿಸುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಬೆಳಗಿನಜಾವ 4.30ಕ್ಕೆ ಪಂಡರವಳ್ಳಿಯಲ್ಲಿ ಪುನಃ ಕಾರ‌್ಯಾಚರಣೆ ಆರಂಭಿಸಿದ್ದರು. ಬೆಳಗ್ಗೆ 4ಕ್ಕೆ ಅದೇ ಸ್ಥಳಕ್ಕೆ ಹುಲಿ ಬಂದು ಹೋಗಿರುವುದು ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಆತಂಕದ ಕ್ಷಣಗಳು
ಸುಮಿತ್ರ ಅವರನ್ನು ಕೊಂದು ಬಚ್ಚಿಟ್ಟುಕೊಂಡಿದ್ದ ಜಾಗದಲ್ಲೇ ಶನಿವಾರ ಸಂಜೆ ಕೊಂದಿದ್ದ ಎರಡೂ ದನಗಳ ಕಳೇಬರ ಇಟ್ಟುಕೊಂಡು ಕಾದು ಕುಳಿತಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಧ್ಯಾಹ್ನ 12.30ರ ವರೆಗೂ ಹುಲಿ ಕಣ್ಣಿಗೆ ಬೀಳಲಿಲ್ಲ. ನಂತರ ಅದೇ ಸ್ಥಳದಲ್ಲಿ ಶಬ್ದ ಕೇಳಿಸಿದ್ದು, ಕಾರ‌್ಯಾಚರಣೆಯಲ್ಲಿದ್ದವರು ಜಾಗೃತರಾದರು.
ಹುಲಿಯನ್ನು ಸುತ್ತುವರಿಯುತ್ತಿದ್ದಂತೆ ಅರಿವಳಿಕೆ ತಜ್ಞ ಡಾ.ಸನತ್ ಮಧ್ಯಾಹ್ನ 1.30ರ ಹೊತ್ತಿಗೆ ಚುಚ್ಚುಮದ್ದು ಶೂಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಚುಚ್ಚುಮದ್ದು ತಾಗಿದರೂ ಹುಲಿ ಮಾತ್ರ 10 ನಿಮಿಷಗಳ ಕಾಲ ಕಣ್ಣಿಗೆ ಬೀಳಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಸಣ್ಣದೊಂದು ಗುಡ್ಡವನ್ನೇರಿ ಕುಳಿತಿತ್ತು. ಬಲೆ ಹಾಕಿ ಹಿಡಿಯುವ ಪ್ರಯತ್ನ ವಿಫಲವಾಗಿ ಅರಣ್ಯ ಸಿಬ್ಬಂದಿ 10 ಅಡಿಗಳಷ್ಟು ಕೆಳಕ್ಕೆ ಜಾರಿದಾಗ ಒಂದು ಕ್ಷಣ ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು.
ಅರಿವಳಿಕೆ ಚುಚ್ಚುಮದ್ದು ತಾಗಿದರೂ ಸತತ ಅರ್ಧ ಗಂಟೆ ಕಾಲ ಗೋಳಾಡಿಸಿದ ಹುಲಿರಾಯ ಕಾಫಿ ತೋಟ ಸೇರಿಕೊಳ್ಳುತ್ತಿದ್ದಂತೆ ಜಾಗೃತರಾದ ಸಿಬ್ಬಂದಿ ಏಕಾಏಕಿ ಬಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾದರು. ಅರಿವಳಿಕೆ ತಜ್ಞ ಡಾ.ಸನತ್ ಮತ್ತೊಂದು ಚುಚ್ಚುಮದ್ದು ನೀಡಿದರು. ಆದರೂ ಅರೆ ಪ್ರಜ್ಞಾವಸ್ಥೆಯಲ್ಲೇ ಇದ್ದ ಹುಲಿಯನ್ನು ಬೋನಿಗೆ ಹಾಕುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರ ಹರ್ಷ ಮುಗಿಲು ಮುಟ್ಟಿತ್ತು.
ಡಿಎಫ್‌ಒ ಮಾಣಿಕ್, ಸಿಸಿಎಫ್ ವೆಂಕಟೇಸನ್, ನಾಗರಾಜ್, ವನ್ಯಜೀವಿ ಮಂಡಳಿ ಸದಸ್ಯ ರಾಣಾ ಜಾರ್ಜ್, ಆರ್‌ಎಫ್‌ಒ ಪ್ರಸಾದ್, ಶಶಿಧರ್, ದಯಾನಂದ್ ಮತ್ತಿತರರು ಕಾರ‌್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಿವಳಿಕೆ ಚುಚ್ಚು ಮದ್ದು ತಾಗಿದರೂ ತಪ್ಪಿಸಿಕೊಂಡ ಹೋದ ಹುಲಿಯ ಜಾಡು ಹಿಡಿದು ಅರಣ್ಯ ಸಿಬ್ಬಂದಿ ಸಾಗುತ್ತಿದ್ದಂತೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿರಾಯ ದಿಢೀರ್ ಪ್ರತ್ಯಕ್ಷವಾಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ. ಕಾರ‌್ಯಾಚರಣೆಯಲ್ಲಿದ್ದವರು ಬಲೆ ಬೀಸಿದರೂ ಇಳಿಜಾರಿನಲ್ಲಿ ತಪ್ಪಿಸಿಕೊಂಡಿತು. ಇದರ ನಡುವೆ ಹಿಡಿಯಲು ಹೋದವರು ಹುಲಿಗೆ ಆಹಾರವಾಗುವುದು ಸ್ವಲ್ಪದರಲ್ಲೇ ತಪ್ಪಿತು. ಈ ಸಂದರ್ಭ ‘ವಿಜಯ ಕರ್ನಾಟಕ’ ಛಾಯಾಗ್ರಾಹಕ ಎ.ಎನ್.ಪ್ರಸನ್ನ ಇಳಿಜಾರಿನಲ್ಲಿ 5- 6 ಪಲ್ಟಿಯಾಗಿ ಕ್ಯಾಮೆರಾದ ಲೆನ್ಸ್ ಪುಡಿ ಪುಡಿಯಾಯಿತು.
ಹುಲಿ ಹಿಡಿದಿದ್ದು ಹೀಗೆ…
* ಬೆಳಗ್ಗೆ 4.30: ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿ ಬಳಿ ಡಿಎಫ್‌ಒ ಮಾಣಿಕ್, ಆರ್‌ಎಫ್‌ಒ ಪ್ರಸಾದ್, ಶಶಿಧರ್, ದಯಾನಂದ್, ವನ್ಯಜೀವಿ ಮಂಡಳಿ ಸದಸ್ಯ ರಾಣಾ ಜಾರ್ಜ್ ಹಾಜರು.
* ಬೆಳಗ್ಗೆ 4ರ ವೇಳೆಗೆ ನರಭಕ್ಷಕ ಹುಲಿ ಬಂದು ಹೋಗಿರುವುದು ಟ್ರ್ಯಾಪಿಂಗ್ ಕ್ಯಾಮೆರಾದಲ್ಲಿ ಪತ್ತೆ.
* ಬೆಳಗ್ಗೆ 4.40: ಸುಮಿತ್ರಮ್ಮ ಅವರನ್ನು ಕೊಂದು ಬಚ್ಚಿಟ್ಟಿದ್ದ ಹುಲ್ಲಿನ ಪೊದೆ ಬಳಿ ಅಡಗಿ ಕುಳಿತ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ
* ಮಧ್ಯಾಹ್ನ 12.30: ಪಂಡರವಳ್ಳಿಯ ಹುಲ್ಲಿನ ಪೊದೆ ಬಳಿ ಹಾಕಿದ್ದ ದನದ ಕಳೇಬರದ ಹತ್ತಿರ ಹುಲಿ ಪ್ರತ್ಯಕ್ಷ
* ಮಧ್ಯಾಹ್ನ 1.30: ಯಶಸ್ವಿಯಾಗಿ ಹುಲಿಗೆ ಅರಿವಳಿಕೆ ಚುಚ್ಚುಮದ್ದು ಶೂಟ್ ಮಾಡಿದ ತಜ್ಞವೈದ್ಯ ಸನತ್
* ಮಧ್ಯಾಹ್ನ 1.45: ಕ್ಷಣಾರ್ಧದಲ್ಲಿ ಮತ್ತೆ ಕಣ್ಮರೆಯಾದ ಹುಲಿ, ಗುಡ್ಡದ ನೆತ್ತಿಯಲ್ಲಿ ಕುಳಿತಿರುವುದು ಪತ್ತೆ.
* ಮಧ್ಯಾಹ್ನ 1.55: ಹುಲಿಗೆ ಬಲೆ ಹಾಕಿ ಹಿಡಿಯಲು ಮಾಡಿದ ಪ್ರಯತ್ನ ವಿಫಲ. 10 ಅಡಿ ಕೆಳಕ್ಕೆ ಜಾರಿದ ಸಿಬ್ಬಂದಿ
* ಮಧ್ಯಾಹ್ನ 2.10: ಹುಲಿಗೆ ಮತ್ತೊಮ್ಮೆ ಬಲೆ ಹಾಕಲು ಪ್ರಯತ್ನ. ನುಗ್ಗಿಬಂದ ಹುಲಿಯಿಂದ ಕೂದಲೆಳೆಯಲ್ಲಿ ಪಾರಾದ ಅರಣ್ಯ ಇಲಾಖೆ ಸಿಬ್ಬಂದಿ
* ಮಧ್ಯಾಹ್ನ 2.30: ಕಾಫಿ ತೋಟ ಸೇರಿಕೊಂಡ ಹುಲಿ. ಏಕಾಏಕಿ ಬಲೆ ಬೀಸಿ ಹುಲಿಯನ್ನು ಸೆರೆ ಹಿಡಿದ ಸಿಬ್ಬಂದಿ. ಡಾ.ಸನತ್ ಅವರಿಂದ ಮತ್ತೊಮ್ಮೆ ಅರಿವಳಿಕೆ ಚುಚ್ಚುಮದ್ದು.
* ಮಧ್ಯಾಹ್ನ 3: ಅರೆಪ್ರಜ್ಞಾವಸ್ಥೆಯಲ್ಲಿದ್ದ ಹುಲಿಯನ್ನು ಬೋನಿಗಿಳಿಸಿ, ಸಾಗಿಸುವ ಕಾರ‌್ಯಾಚರಣೆ.
ಹುಲಿ ಸೆರೆ ಕಾರ‌್ಯಾಚರಣೆ
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ಪಂಡರವಳ್ಳಿ ತೋಟದ ಬಳಿ ಕಾರ್ಮಿಕ ಮಹಿಳೆಯೊಬ್ಬಳನ್ನು ಕೊಂದು ಭೀತಿ ಸೃಷ್ಟಿಸಿದ್ದ ನರಭಕ್ಷಕ ಹುಲಿ 48 ಗಂಟೆಗಳ ಸತತ ಕಾರ್ಯಚರಣೆ ಬಳಿಕ ಸೋಮವಾರ ಅರಣ್ಯ ಸಿಬ್ಬಂದಿ ಬಲೆಗೆ ಬಿದ್ದಿದೆ. ವಿಜಯಕರ್ನಾಟಕ ಛಾಯಾಗ್ರಾಹಕ ಎ.ಎನ್.ಪ್ರಸನ್ನ ಅವರು ಸೆರೆ ಹಿಡಿದಿರುವ ಹುಲಿ ಸೆರೆ ಕಾರ‌್ಯಾಚರಣೆಯ ಎಕ್ಸ್‌ಕ್ಲೂಸಿವ್ ಸರಣಿ ಚಿತ್ರಗಳು ಇಲ್ಲಿವೆ.