ಬೆಂಗಳೂರು, ನ. 19: ದೇಶವನ್ನು ಕಾಯುವ ಸೈನಿಕರು, ದೇಶಕ್ಕೆ ಅನ್ನ ನೀಡುವ ರೈತರು ಅಭಿವೃದ್ಧಿಯಾದಲ್ಲಿ ಎಲ್ಲ ರಂಗಗಳಲ್ಲಿಯೂ ದೇಶ ಅಭಿವೃದ್ಧಿಯಾಗುತ್ತದೆ ಎಂದು ರಾಜ್ಯಪಾಲ ವಜುಬಾಯ್ ರುಡಬಾಯ್ ವಾಲ ಪ್ರತಿಪಾದಿಸಿದ್ದಾರೆ.
ಕರ್ನಾಟಕ ಸರಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸಕ್ತ ಸಂದರ್ಭದಲ್ಲಿ ಸೈನಿಕರ ಜೀವನ ಮಟ್ಟದಲ್ಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆ ಯಾಗುತ್ತಿದೆ. ಆದರೆ, ರೈತರ ಜೀವನ ಮಾತ್ರ ಅತಂತ್ರದಲ್ಲಿಯೇ ಇದ್ದು, ರೈತ ಬಲಿಷ್ಠನಾದರೆ ದೇಶ ಬಲಿಷ್ಠವಾಗಲಿದೆ. ರೈತ ಖುಷಿಯಾಗಿದ್ದರೆ ಮಾತ್ರ ಸಮಾಜ ಖುಷಿಯಾಗಿರುತ್ತದೆ. ಆದ್ದರಿಂದ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳ ಉಪಯೋಗ ಸೂಕ್ತ ಸಮಯದಲ್ಲಿ ರೈತನಿಗೆ ದೊರಕಬೇಕು. ಸರಕಾರಗಳು ದೇಶದ ಪ್ರತಿಯೊಬ್ಬರ ಕೈಗೂ ಕೆಲಸ, ಪ್ರತಿಯೊಂದು ಹೊಲಕ್ಕೂ ನೀರು ಹರಿಸುವಂತೆ ಮಾಡಬೇಕು ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ ಬಂದ ಸಂದರ್ಭದಲ್ಲಿ ಶೇ. 80ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದರು. ಆದರೆ ಈಗ ಶೇ. 65ರಷ್ಟು ಜನ ಮಾತ್ರ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದು, ನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೃಷಿ ಲಾಭದಾಯಕವಲ್ಲ ಮತ್ತು ಕಡಿಮೆ ಇಳುವರಿ ಎಂದು ಅವರು ತಿಳಿಸಿದರು.
ಇಸ್ರೇಲ್ನಲ್ಲಿ 4 ಸೆಂ.ಮೀ.ನಷ್ಟು ಮಳೆಯಾದರೂ ಅಲ್ಲಿನ ರೈತರು ಹಲವು ಉತ್ಪನ್ನಗಳನ್ನು ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತ ವರ್ಷಕ್ಕೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಸಾಕಷ್ಟು ನೀರು ದೊರೆಯುತ್ತಿದ್ದರೂ ವರ್ಷಕ್ಕೆ ಒಂದೇ ಬೆಳೆ ಬೆಳೆಯುವಂತಾಗಿದೆ ಎಂದು ವಾಲಾ ಅಸಮಾಧಾನ ವ್ಯಕ್ತಪಡಿಸಿದರು.
ಗುಜರಾತ್‌ನಲ್ಲಿ ವರ್ಷದ ಒಂದು ದಿನ ಜನಪ್ರತಿನಿಧಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು ಪ್ರತೀ ಗ್ರಾಮಕ್ಕೆ ಭೇಟಿ ನೀಡಿ, ರೈತರನ್ನು ಸಂಪರ್ಕಿಸಿ ಅವರ ಹೊಲದಲ್ಲಿ ಯಾವ ಬೆಳೆ ಬೆಳೆದರೆ ಅನುಕೂಲ ಹಾಗೂ ಯಾವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಇಲ್ಲಿಯೂ ಸಹ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಚೆೆಕ್ ಡ್ಯಾಂಗಳನ್ನು ನಿರ್ಮಿಸಿ: ರಾಜ್ಯದಲ್ಲಿ ಸಾಕಷ್ಟು ನದಿಗಳು ಹರಿಯುತ್ತಿವೆ. ಹಲವು ಪ್ರಮುಖ ನದಿಗಳ ನೀರು ಸಮುದ್ರ ಸೇರುತ್ತಿದೆ. ಇವುಗಳಿಗೆ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ತಡೆದು ಕಾಲುವೆಗಳ ಮೂಲಕ ರೈತರಿಗೆ ನೀರು ಒದಗಿಸಬೇಕು. ಗ್ರಾಮಗಳಲ್ಲಿ ಬಿದ್ದ ನೀರನ್ನು ಗ್ರಾಮದಲ್ಲಿಯೇ ಬಳಸಿಕೊಳ್ಳಬೇಕೇ ವಿನಾ ಹರಿದು ಪೋಲಾಗುವುದಕ್ಕೆ ಬಿಡಬಾರದು ಎಂದು ಅವರು ಸಲಹೆ ನೀಡಿದರು.
ರಾಜ್ಯಗಳ ನಡುವೆ ಜಗಳ ಸಲ್ಲ: ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು, ಕೇರಳ, ಕರ್ನಾಟಕದ ಎಲ್ಲರೂ ಪರಸ್ಪರ ಸಹೋದರರಿದ್ದಂತೆ ಹಂಚಿಕೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಕಿತ್ತಾಟ ಸರಿಯಲ್ಲ ಎಂದು ಅವರು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ:
ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಕಲೇಶಪುರದ ಎಚ್.ಎಲ್.ನರೇಶ್, ಶಿವಮೊಗ್ಗ ಜಿಲ್ಲೆಯ ಜಿ.ಎಂ.ರಘು, ಶೃಂಗೇರಿ ತಾಲೂಕಿನ ಎ.ಎಂ. ಮಲ್ಲಪ್ಪಹೆಗಡೆ ಅವರಿಗೆ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಪಿ.ಕುಮಾರ್, ಕೃಷಿ ಇಲಾಖೆಯ ಕಾರ್ಯದರ್ಶಿ ಭರತ್‌ಲಾಲ್ ಮೀನಾ, ಎಚ್.ಪಿ.ರಾಜು ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಭಾಗ್ಯ ಯೋಜನೆ ತಿಂಗಳಲ್ಲಿ ಅನುಷ್ಠಾನ: ಕೃಷ್ಣಬೈರೇಗೌಡ ಬೆಂಗಳೂರು, ನ. 19: ರಾಜ್ಯದಲ್ಲಿ ಕೃಷಿಕರ ನೀರಾವರಿ ಸಮಸ್ಯೆಯನ್ನು ಈಡೇರಿಸಲು, ಕೃಷಿಯಲ್ಲಿರುವ ಅನಿಶ್ಚಿತತೆ ಹೋಗಲಾಡಿಸಿ ಸುಸ್ಥಿರತೆ ಕಾಪಾಡಲು ಪರಿಚಯಿಸಿರುವ ಕೃಷಿ ಭಾಗ್ಯ ಯೋಜನೆ ಒಂದು ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಭಾಗ್ಯ ಯೋಜನೆಯಡಿ ಪ್ರತೀ ರೈತನಿಗೆ 2 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಗಾಗಿ ರಾಜ್ಯ ಸರಕಾರ ಈಗಾಗಲೇ ಇದಕ್ಕಾಗಿ 500 ಕೋಟಿ ರೂ. ಅನುದಾನ ತೆಗೆದಿರಿಸಿದೆ ಎಂದರು.
ಮಳೆ ನೀರು ಹರಿದು ಪೋಲಾಗದಂತೆ ಗುಂಡಿ ತೆಗೆದು ಉಳಿಸಿಕೊಳ್ಳುವುದಕ್ಕಾಗಿ ಬೇಕಾದ ಉಪಕರಣಗಳನ್ನು ಖರೀದಿಸಲು ಸಹಾಯಧನದ ಮೂಲಕ ಸರಕಾರ ನೆರವು ಒದಗಿಸಲಿದೆ. ಅಲ್ಲಿ ಶೇಖರಣೆಗೊಂಡ ನೀರನ್ನು ಹನಿನೀರಾವರಿ ಮೂಲಕ ಮಳೆಬಾರದ ದಿನಗಳಲ್ಲೂ ಬಳಸಿಕೊಳ್ಳಲು ಅವಕಾಶವಿರುತ್ತದೆ. ಈ ಯೋಜನೆ ಯಶಸ್ವಿಯಾದರೆ, ಮಳೆಯಾಧಾರಿತ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಅವರು ತಿಳಿಸಿದರು.
ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತೀ ರೈತರಿಗೂ ಮಣ್ಣು ಆರೋಗ್ಯ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ರೈತರಿಗೂ ಈ ಕಾರ್ಡ್ ದೊರೆಯಲಿದೆ. ಇದರಿಂದ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ರೈತರು ತಿಳಿದುಕೊಳ್ಳಬಹುದು ಎಂದು ಅವರು ತಿಳಿಸಿದರು.
‘ಕೇಂದ್ರದ ವಿಳಂಬ ಧೋರಣೆ’
ರಾಜ್ಯದಲ್ಲಿ ತಲೆದೋರಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಕೋಟ್ಯಂತರ ರೂ. ಮೌಲ್ಯದ ಬೆಳೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಈಗಾಗಲೇ ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೂ ಕೇಂದ್ರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಆರೋಪಿಸಿದರು.
ಕೇಂದ್ರ ಸರಕಾರದಿಂದ ಪರಿಹಾರ ಬಾರದ ಕಾರಣ ಅದಕ್ಕಾಗಿ ರಾಜ್ಯ ಸರಕಾರ ಕಾಯ್ದೆ 2014-15ನೆ ಸಾಲಿನಲ್ಲಿ 537 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಬೆಳೆ ನಷ್ಟಕ್ಕೆ ಕೇಂದ್ರ ಸರಕಾರದ ಪರಿಹಾರದ ಮಾನದಂಡ ಕಡಿಮೆ ಇದ್ದರೂ ರಾಜ್ಯ ಸರಕಾರ ಹೆಚ್ಚಿನ ಪರಿಹಾರ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
http://vbnewsonline.com