ಪಡ್ಡೆ ಯುವಕರಿಗೆ ಬೇಕಾದ ಎಲ್ಲ ಸೂತ್ರಗಳೊಂದಿಗೆ ಅಂಬರೀಶ ಈ ವಾರ ತೆರೆಗೆ ಅಪ್ಪಳಿಸಿದೆ. ಆಕ್ಷನ್-ಫೈಟುಗಳನ್ನೇ ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ ದರ್ಶನ್ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ.
ಅಂಬಿ (ದರ್ಶನ್) ಗುರು ರಾಘವೇಂದ್ರನ ಭಕ್ತ. ರಾಘವೇಂದ್ರ ಸ್ವಾಮಿ ಮಠ ಇರುವ ಊರಿನಲ್ಲಿ ಅಂಬಿ ಬಹಳ ಒಳ್ಳೆಯ ಸ್ವಭಾವದ, ಒಳ್ಳೆಯದನ್ನಷ್ಟೆ ಮಾಡುವ, ಹಸು ಕರುಗಳೆಂದರೆ ಪ್ರಾಣ ಬಿಡುವ (ಲಾರಿಯಲ್ಲಿ ಸಾಗಿಸುತ್ತಿದ್ದ ಹಸು-ಕರುಗಳನ್ನೂ ರಕ್ಷಿಸುತ್ತಾನೆ), ಹುಡುಗಿಯೊಬ್ಬಳನ್ನು (ರಚಿತಾ ರಾಮ್ ) ಪ್ರೀತಿಸುತ್ತಿರುವ, ಬಿಸಿ ರಕ್ತದ ಯುವಕ. ಅಲ್ಲಿನ ರೈತರು ಅಲ್ಲೊಬ್ಬ ಶ್ರೀಮಂತನ ಹತ್ತಿರ ಸಾಲ ತೆಗೆದುಕೊಂಡು, ತಲೆ ಎತ್ತಲಿರುವ ಸ್ಟೀಲ್ ಪ್ಲಾಂಟ್ ಒಂದಕ್ಕೆ ತಮ್ಮ ಜಮೀನನ್ನು ಕಳೆದುಕೊಳ್ಳುವ ಸ್ಥಿತಿ ಬಂದೆರಗಿದಾಗ ಅವರ ಜಮೀನುಗಳನ್ನು ರಕ್ಷಿಸಲು ಅಂಬಿ ಅವರ ಸಾಲವನ್ನೆಲ್ಲಾ ತೀರಿಸಲು ಒಪ್ಪಿಕೊಳ್ಳುತ್ತಾನೆ. ಸಾಲ ತೀರಿಸಲು ಅಗತ್ಯವಾದ ಹಣ ಸಂಪಾದಿಸಲು ಬೆಂಗಳೂರಿಗೆ ಊರಿನ ಜನರೊಂದಿಗೆ ವಲಸೆ ಬಂದು ಕಟ್ಟಡ ನಿರ್ಮಾಣದ ಕೂಲಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಇದು ಫ್ಲಾಶ್ ಬ್ಯಾಕ್.
ಬೆಂಗಳೂರಿನ ಕಥೆಯಲ್ಲಿ ನಾಯಕ ಅಂಬಿ, ಕೆಂಪೇಗೌಡನ ಆಧುನಿಕ ಅವತಾರವಾಗುತ್ತಾನೆ. ಈಗ ಮುಚ್ಚಿರುವ ಕೆಂಪಾಂಬುಧಿ ಕೆರೆಯ ಮೇಲೆ ಕೆಸಿನೊ ಕಟ್ಟುವುದಕ್ಕೆ ಸಂಚು ಮಾಡುವುದರ ವಿರುದ್ಧ ಯುದ್ಧ ಮಾಡಲು ಕೆಂಪೇಗೌಡನ ವಿಗ್ರಹ ತನ್ನ ಖಡ್ಗವನ್ನು ಅಂಬಿಯೆಡೆಗೆ ಬೀಳಿಸುತ್ತದೆ. ಅಲ್ಲಿಂದ ಪ್ರಾರಂಭ ಆಧುನಿಕ ಕೆಂಪೇಗೌಡನ ರಕ್ತಸಿಕ್ತ ಸಮರ. ಇವನ ವಿರುದ್ಧ ಸಾವಿರ ರುಪಾಯಿ ನೋಟಿನಲ್ಲಿ ಬೆವರು ಒರೆಸಿಕೊಳ್ಳುವ ಬಿಲ್ಡರ್-ನಾಯಕಿ (ಪ್ರಿಯಾಮಣಿ) ಬಂದು ನಿಂತರೂ ಏನೂ ಪ್ರಯೋಜನವಿಲ್ಲ. ಆಪರೇಶನ್ ಕೆಂಪೇಗೌಡ ಹೆಸರಿನಲ್ಲಿ ಬೆಂಗಳೂರಿನ ಒತ್ತುವರಿಯನ್ನು ತೆರವುಗೊಳಿಸಬೇಕೆಂಬ ಪೋಲೀಸರ ಯೋಜನೆಯನ್ನು, ರೌಡಿಗಳನ್ನು, ತಪ್ಪು ಮಾಡಿದ ಬಿಲ್ಡರ್ಗಳನ್ನು ಕತ್ತಿಯಲ್ಲಿ ಕೊಚ್ಚಿ ಮುಖಕ್ಕೆ ರಕ್ತ ಸಿಂಚನ ಮಾಡಿಕೊಂಡು ಅಂಬಿ ಬೆಂಗಳೂರನ್ನು ರೌಡಿ ಮುಕ್ತ-ಒತ್ತುವರಿ ಮುಕ್ತ ಮಾಡುತ್ತಾನೆ. ಈಗ ಇವನನ್ನು ಮಟ್ಟ ಹಾಕಲು ಮಲೇಶಿಯಾದ ದಣಿಯೆ ಬಂದರು ಏನು ಪ್ರಯೋಜನ?
ಮೊದಲಾರ್ಧ ಚಲನಚಿತ್ರದಲ್ಲಿ ಸ್ವಲ್ಪ ಲವಲವಿಕೆ ಕಂಡರೂ, ದ್ವಿತೀಯಾರ್ಧ ಬರೀ ಫೈಟುಗಳಿಂದ ತುಂಬಿದೆ. ದರ್ಶನ್ ಅಭಿಮಾನಿಗಳಿಗೆ ತನ್ನ ಸಂಭಾಷಣೆಯಿಂದ ಸಿನೆಮಾವನ್ನು ಎತ್ತಿ ನಿಲ್ಲಿಸುತ್ತಾರೆ. ರಚಿತಾ ರಾಮ್, ಸೌಮ್ಯ ನಾಯಕಿಯ ಪಾತ್ರದಲ್ಲೂ ಪ್ರಿಯಾಮಣಿ ಜಂಭದ ಯುವತಿಯ ಪಾತ್ರದಲ್ಲೂ ಚೊಕ್ಕವಾದ ಅಭಿನಯ ನೀಡಿದ್ದಾರೆ. ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಬಿರಾದರ್ ಅವರ ಹಾಸ್ಯ ಸನ್ನಿವೇಶ ಬೋರು ಹೊಡೆಸುತ್ತದೆ. ಹಾಡುಗಳು ಸಿನೆಮಾಗೆ ಪೂರಕವಾಗಿದ್ದರೂ, ಮನಸ್ಸಿನಲ್ಲಿ ಅಚ್ಚುಳಿಯುವಂತವೇನೂ ಅಲ್ಲ.
ನಿರ್ದೇಶಕ ಮಹೇಶ್ ಸುಖಧರೆ ಇಂತಹ ರಂಜಿತ ಮಾಸ್ ಸಿನೆಮಾದಲ್ಲೂ ಒಂದೆರಡು ಅಂಶಗಳನ್ನು ಗಮನಾರ್ಹ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿರುವುದು ಶ್ಲಾಘನೀಯ. ಮೊದಲನೆಯದು ಕೆರೆಗಳ ನಾಡಾಗಿದ್ದ ಬೆಂಗಳೂರಿನಲ್ಲಿ ಮತ್ತು ಕರ್ನಾಟಕದ ಇನ್ನಿತರ ಜಾಗಗಳಲ್ಲಿ ಕೆರೆಗಳು ಒತ್ತುವರಿ ಆಗಿ, ನಾಡು ಹಾಳಾಗುತ್ತಿರುವುದನ್ನು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೂ ಕೆರಗಳ-ಪರಿಸರದ ರಕ್ಷಣೆಗೆ ಒತ್ತು ಕೊಟ್ಟಂತೆ ಕಾಣುವುದಿಲ್ಲ, ಬದಲಾಗಿ ಒತ್ತುವರಿ ಮಾಡಿದವರ ನಿರ್ಮೂಲನೆಯಷ್ಟೇ ಮುಖ್ಯವಾಗಿದೆ. ಎರಡನೆಯದಾಗಿ, ಕೆಂಪೇಗೌಡ ಒಬ್ಬ ಪಾಳೇಗಾರ ಅಷ್ಟೇ ಎಂಬ ಒಂದು ವಿವಾದಾತ್ಮಕ ಇತಿಹಾಸವನ್ನು ವಿಭಿನ್ನವಾಗಿ ಬಿಂಬಿಸಲು ಪ್ರತ್ನಿಸಿರುವುದು. ಕೆಂಪೇಗೌಡ ವಿಜಯನಗರದ ಕೃಷ್ಣದೇವರಾಯನಿಗೆ ಅತಿ ಹತ್ತಿರದವನಾಗಿದ್ದ ಮತ್ತು ರಾಯ ಎಂಬ ಬಿರುದು ಪಡೆದಿದ್ದ ಎಂಬುದು ಇತಿಹಾಸದ ಒಂದು ಶಾಲೆಯ ಅಭಿಪ್ರಾಯ. ಈ ವಾದವನ್ನು ಮಂಡಿಸಲು, ಕೃಷ್ಣದೇವರಾಯ ಕೆಂಪೇಗೌಡನ ಸರಿಸಮದಲ್ಲಿ ಕೂತುಕೊಳ್ಳುವ ಒಂದು ದೃಶ್ಯ ಸಿನೆಮಾದ ಹಾಡೊಂದರಲ್ಲಿ ಬರುತ್ತದೆ. ಆದರು ಇಲ್ಲಿ ನಿರ್ದೇಶಕರು ಎಡವಿರುವುದು ಅಂಬರೀಶ್ ಅವರನ್ನು ಕೆಂಪೇಗೌಡನ (ಮೂಲ) ಪಾತ್ರದ ಪೋಷಣೆಗೆ ಆಯ್ಕೆ ಮಾಡಿರುವುದರಲ್ಲಿ. ಅಂಬರೀಶ್ ಅವರು ಕುದುರೆ ಓಡಿಸುವುದನ್ನು ತೋರಿಸಲು ಗ್ರಾಫಿಕ್ಸ್ ನಲ್ಲಿ ಹರ ಸಾಹಸ ಮಾಡಿದ್ದಾರೆ. ಹಂಪಿಯ ಗತ ವೈಭವವನ್ನೂ ಸರಿಯಾಗಿ ಹಿಡಿದಿಟ್ಟಿಲ್ಲ.
ಸಿನೆಮಾ ರಂಜನೆಯಾದರೂ ಕೆಲವು ಕನಿಷ್ಠ ಸಾಮಾಜಿಕ ಜವಾಬ್ದಾರಿಗಳನ್ನು ಸಿನೆಮಾದವರು ಮರೆಯಬಾರದು. ಕಾನೂನನ್ನು ಧಿಕ್ಕರಿಸಿ ಹೀರೋವನ್ನು ವೈಭವೀಕರಿಸುವಾಗ ಸೂಕ್ಷ್ಮತೆ ತೋರಿ ಜಾಗರೂಕರಾಗಬೇಕು. ‘ಧರ್ಮ ರಕ್ಷಣೆಗಾಗಿ ಕೆಲವು ತಲೆಗಳು ಉರುಳುತ್ತವೆ’ ಎಂಬ ಪ್ರಾಚೀನ ಹಳಸು ತತ್ತ್ವಗಳನ್ನು ಸಂಭಾಷಣೆಯಲ್ಲಿ ಪ್ರತಿಪಾದಿಸುವುದರಿಂದ ಹಾಗೂ ಕಾನೂನನ್ನು ಕೈಗೆ ತೆಗೆದುಕೊಂಡು ರೌಡಿಗಳನ್ನು ಮನಬಂದಂತೆ ಕೊಚ್ಚಿ ಕೊಚ್ಚಿ ಸಾಯಿಸಿ, ದೊಡ್ಡ ಮನುಷ್ಯನಾಗುವುದು ಬಹುಶಃ ಯುವಕರಿಕೆ ಒಳ್ಳೆಯ ಸಂದೇಶ ನೀಡುವುದಿಲ್ಲ. ಕಿಸ್ ದೃಷ್ಯವನ್ನೋ, ಐಟಮ್ ಸಾಂಗಿಗೋ ಸೆನ್ಸಾರ್ ನವರು ಕತ್ತರಿ ಹಾಕುವುದರ ಬದಲು ಕಾನೂನು ಧಿಕ್ಕರಿಸುವ ವೈಭವೀಕರಣ ದೃಶ್ಯಗಳನ್ನು ತಿದ್ದುವತ್ತ ಗಮನ ಹರಿಸುವುದು ಒಳಿತು!