ಬೆಂಗಳೂರು: ‘ವೈದ್ಯರು ಖಾಲಿ ಹೊಟ್ಟೆಯಲ್ಲಿ ಬನ್ನಿ ಅಂತಾರೆ. ನಿಜ. ಅದಕ್ಯಾಕೆ ಆತಂಕ..? ವೈದ್ಯಕೀಯ ಪರೀಕ್ಷೆಯ ಫಲಿತಾಂಶ ನಿಖರವಾಗಿ ಬರಲಿ ಅಂತ ತಾನೆ ಅವರು ಹಾಗೆಲ್ಲಾ ಹೇಳೋದು…’ ಇದು ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರಿಗೆ ಹೈಕೋರ್ಟ್ ಹೇಳಿದ ಮಾತು.
ಅತ್ಯಾಚಾರದ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಲು ಕಾನೂನು ಸಮರ ನಡೆಸುತ್ತಿರುವ ಸ್ವಾಮೀಜಿಯವರ ಪರ ಹಾರನಹಳ್ಳಿ ಸೋಮವಾರ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅವರ ಏಕಸದಸ್ಯ ಪೀಠದ ಮುಂದೆ ಒಂದೂಮುಕ್ಕಾಲು ಗಂಟೆ ವಾದ ಮಂಡಿಸಿದರು.
‘ನನ್ನ ಕಕ್ಷಿದಾರರನ್ನು ವೈದ್ಯಾಧಿಕಾರಿಗಳು ಪರೀಕ್ಷೆಗೆ ಅಂತ ಕರೆದುಕೊಂಡು ಹೋಗಿ ಮತ್ತೇನಾದರೂ ಬಲವಂತದ ಪರೀಕ್ಷೆ ನಡೆಸಿಬಿಟ್ಟರೆ ಗತಿಯೇನು..? ಇದರಿಂದ ಸಂವಿಧಾನದಲ್ಲಿ ಕ್ರಿಮಿನಲ್ ಆರೋಪಿಗೆ ನೀಡಿರುವ ಹಕ್ಕುಗಳ ರಕ್ಷಣೆ ಆದೀತು ಹೇಗೆ? ವೈದ್ಯಕೀಯ ಪರೀಕ್ಷೆಗೆ ಹಾಜರಾಗಿ ಎಂದು ಪೊಲೀಸರು ನೀಡಿರುವ ನೋಟಿಸ್ ಕಾನೂನು ಉಲ್ಲಂಘನೆಯಲ್ಲವೇ…’ ಎಂಬ ವ್ಯಾಕುಲವನ್ನು ಹೊರಗೆಡವಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ತನಿಖೆಯ ಈ ಘಟ್ಟದಲ್ಲಿ ನಿಮಗ್ಯಾಕೆ ಇಷ್ಟೊಂದು ಅನುಮಾನ? ನನ್ನ 59 ವರ್ಷಗಳ ಜೀವನದಲ್ಲೇ ನೋಡದಂತಹ ಮತ್ತು ಕೇಳದಂತಹ ಅಪರೂಪದ ಕ್ರಿಮಿನಲ್ ಪ್ರಕರಣದ ವಿಚಾರಣೆ ಇದಾಗಿದೆ. ಆರೋಪಿಯ ಸ್ಥಾನವನ್ನು, ಘನತೆಯನ್ನು ತನಿಖಾಧಿಕಾರಿಗಳು ಈತನಕವೂ ಜತನವಾಗಿ ಕಾಯ್ದುಕೊಂಡು ಬರುತ್ತಿದ್ದಾರೆ. ಆರೋಪಿಯ ವಿಚಾರಣೆಯನ್ನು ಚಿತ್ರೀಕರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಹೀಗಿದ್ದೂ ನೀವು ವೈದ್ಯಕೀಯ ಪರೀಕ್ಷೆ ಬಗ್ಗೆ ವ್ಯಕ್ತಪಡಿಸುತ್ತಿರುವ ಶಂಕೆ ಒಪ್ಪಲು ಸಾಧ್ಯವಿಲ್ಲದಂತಹುದು. ಒಂದು ವೇಳೆ ವೈದ್ಯರು ಏನಾದರೂ ಈ ರೀತಿ ಕಾನೂನು ಉಲ್ಲಂಘಿಸಿದರೆ ಕಡೆಗೆ ಕೋರ್ಟ್ ಇದ್ದೇ ಇದೆಯಲ್ಲಾ’ ಎಂಬ ಭರವಸೆ ನೀಡಿದರು.
ಈ ಹಂತದಲ್ಲಿ ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಎಸ್. ದೀಕ್ಷಿತ್ ಅವರು, ‘ಅರ್ಜಿದಾರರು ಅನುಮಾನಿಸುತ್ತಿರುವಂತೆ ಕರ್ನಾಟಕ ಪೊಲೀಸರು ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಬರುವುದಿಲ್ಲ. ಇದಕ್ಕೆ ಸಂಬಂಧಿಸಿ ಸಂವಿಧಾನದ ಅನುಚ್ಛೇದ 246 ರಿಂದ 254ನ್ನು ಈಗಾಗಲೇ ವಿಸ್ತರಿಸಿ ಹೇಳಲಾಗಿದೆ’ ಎಂದು ಸ್ಪಷ್ಟನೆ ನೀಡಿದರು. ಆದರೆ ಹಾರನಹಳ್ಳಿ ಅವರು ಇದನ್ನು ಆಕ್ಷೇಪಿಸಿ ‘ರಾಷ್ಟ್ರೀಯ ಕಾನೂನು ಆಯೋಗವು ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲೇ ಲೋಪ ಇದೆ’ ಎಂದರು.
ಇದನ್ನು ಅಲ್ಲಗಳೆದ ದೀಕ್ಷಿತ್, ‘ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಲು ಆಧುನಿಕ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ದೇಹದ ಜೀವರಸಗಳನ್ನು ಒಪ್ಪಿಗೆಯ ಮೂಲಕ ಹೊರ ತೆಗೆಯಬಹುದು ಎಂಬ ಅಂಶವು ಆರೋಪಿಯ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ’ ಎಂದು ಪ್ರತಿಯಾಗಿ ವಾದಿಸಿದರು. ವಿಚಾರಣೆಯನ್ನು ಮಂಗಳವಾರಕ್ಕೆ (ನ.25) ಮುಂದೂಡಲಾಗಿದೆ.
ಟಿ.ವಿ.ಗಳಲ್ಲಿ ಚರ್ಚೆ ಸರಿಯೇ?
ನ್ಯಾಯಾಲಯದಲ್ಲಿರುವ ವಿಚಾರಣಾಧೀನ ಪ್ರಕರಣಗಳ ಕುರಿತು ವಕೀಲರು ಟಿ.ವಿ. ಚಾನೆಲ್ಗಳಲ್ಲಿ ಕುಳಿತು ಚರ್ಚಿಸುವುದು ಒಳ್ಳೆಯದಲ್ಲ. ಮಾಧ್ಯಮಗಳು ತಂತಮ್ಮ ಅಸ್ತಿತ್ವಕ್ಕಾಗಿ ಪೈಪೋಟಿಗಿಳಿದಿರುವ ಈ ದಿನಗಳಲ್ಲಿ ವಕೀಲರಾದವರು ಇಂತಹ ಚರ್ಚೆಗಳಲ್ಲಿ ಪಾಲ್ಗೊಂಡರೆ ಹೇಗೆ?
–ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ
ಮುಖ್ಯಾಂಶಗಳು
* ಕರ್ನಾಟಕ ಪೊಲೀಸರು ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ– ಸಹಾಯಕ ಸಾಲಿಸಿಟರ್ ಜನರಲ್
* ಆರೋಪಿಯ ದೇಹದಿಂದ ಜೀವರಸಗಳನ್ನು ಪರೀಕ್ಷೆಗಾಗಿ ಹೊರ ತೆಗೆದರೆ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆದೀತು ಹೇಗೆ?
*ಇಂದೂ ವಾದ ಮುಂದುವರಿಕೆ