ಮಕಾವ್, ನ.30: ಎರಡು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತೊಮ್ಮೆ ಮಕಾವ್ ಗ್ರಾನ್ ಪ್ರಿ ಗೋಲ್ಡ್ ಟ್ರೋಫಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಕೊರಿಯಾದ ಕಿಮ್ ಹ್ಯೂ ಮಿನ್ ಅವರನ್ನು 21-12, 21-17 ನೇರ ಸೆಟ್‌ಗಳಿಂದ ಮಣಿಸಿ ಸತತ ಎರಡನೆ ಬಾರಿ ಮಕಾವ್ ಮಹಿಳೆಯರ ಸಿಂಗಲ್ಸ್ ಕಿರೀಟ ಧರಿಸಿದರು. 1,20,000 ಯುಎಸ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಟಾಪ್ ಸೆಯಾಕ್ ಮಲ್ಟಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವದ ನಂ.11 ಶ್ರೇಯಾಂಕದ ಸಿಂಧು ಅವರು 91ನೆ ಶ್ರೇಯಾಂಕದ ಕಿಮ್ ವಿರುದ್ಧ ಸುಲಭವಾಗಿ ಜಯ ಸಾಧಿಸಿದರು. ಇವರ ನಡುವಿನ ಹಣಾಹಣಿ 45 ನಿಮಿಷಗಳಲ್ಲಿ ಕೊನೆಗೊಂಡಿತು.
ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ ಸಿಂಧುಗೆ ಕಿಮ್ ಅವರಿಂದ ಕಠಿಣ ಸವಾಲು ನಿರೀಕ್ಷಿಸಲಾಗಿತ್ತು. ಏಳನೆ ಶ್ರೇಯಾಂಕದ ಚೀನಾದ ಯು ಸುನ್‌ರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಕಿಮ್ ಅವರು ಅನುಭವಿ ಸಿಂಧುಗೆ ಕಠಿಣ ಸವಾಲನ್ನು ನೀಡುವಲ್ಲಿ ಎಡವಿದರು.
ಕಿಮ್ ಆರಂಭದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದರು. ಆದರೆ ನಿಧಾನವಾಗಿ ಹಿಡಿತ ಸಾಧಿಸುವ ಕಡೆಗೆ ಹೆಜ್ಜೆ ಇರಿಸಿದ ಸಿಂಧು ಅವರು ಮತ್ತೆ ಚೇತರಿಸಿಕೊಳ್ಳಲು ಕಿಮ್‌ಗೆ ಅವಕಾಶ ನೀಡಲಿಲ್ಲ.
ಸಿಂಧು ಕಳೆದ ಜನವರಿಯಲ್ಲಿ ಸೈಯ್ಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌ಗೆ ಶರಣಾಗಿದ್ದರು.
ಗೆಲುವಿನಿಂದ ಸಂತಸವಾಗಿದೆ: ಸಿಂಧು
ಮಕಾವ್,ನ.30: ಎರಡನೆ ಬಾರಿ ಪ್ರಶಸ್ತಿ ಜಯಿಸಿರುವ ಹಿನ್ನೆಲೆಯಲ್ಲಿ ಸಂತಸವಾಗಿದೆ ಎಂದು ಮಕಾವ್ ಗ್ರಾನ್ ಪ್ರಿ ಗೋಲ್ಡ್ ಟ್ರೋಫಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ರವಿವಾರ ಪ್ರಶಸ್ತಿ ಬಾಚಿಕೊಂಡಿರುವ ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಅಭಿಪ್ರಾಯಪಟ್ಟಿದ್ದಾರೆ.
‘‘ ಎದುರಾಳಿ ಆಟಗಾರ್ತಿ ಕಿಮ್ ಚೆನ್ನಾಗಿ ಆಡಿದರು. ಅವರ ವಿರುದ್ಧ ಗೆಲುವು ಸುಲಭವಲ್ಲ ಎಂಬ ವಿಚಾರ ಗೊತ್ತಿತ್ತು. ಕೆಲವು ಉತ್ತಮ ಆಟಗಾರ್ತಿಯರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಕಿಮ್ ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು. ನನ್ನ ನೈಜ ಆಟ ಫಲ ನೀಡಿತು. ನನ್ನ ಪ್ರದರ್ಶನ ತೃಪ್ತಿ ನೀಡಿದೆ’’ ಎಂದು ಸಿಂಧು ಹೇಳಿದರು.
‘‘ಈ ವರ್ಷದ ಸಾಧನೆ ತೃಪ್ತಿ ನೀಡಿದೆ. ನನಗೆ ಉತ್ತಮ ಆಟಗಾರ್ತಿಯರನ್ನು ಮಣಿಸಲು ಸಾಧ್ಯವಾಗಿದೆ.ವಿಶ್ವ ಚಾಂಪಿಯನ್‌ಷಿಪ್ ಮತ್ತು ಏಶ್ಯನ್ ಗೇಮ್ಸ್‌ನಂತಹ ಪ್ರಮುಖ ಇವೆಂಟ್‌ಗಳಲ್ಲಿ ಪದಕ ಸಿಕ್ಕಿದೆ. ಕಠಿಣ ತಯಾರಿಯೊಂದಿಗೆ ಮುಂದಿನ ವರ್ಷ ಉತ್ತಮ ಪ್ರದರ್ಶನ ನೀಡುವ ಯೋಜನೆಯಲ್ಲಿರುವೆ ’’ ಎಂದು ಸಿಂಧು ನುಡಿದರು.