ಜೆರುಸಲೇಂ, ನ.30: ಬೌನ್ಸರ್ ತಲೆಗೆ ಬಡಿದು ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಸಾವಿನ ಆಘಾತದಿಂದ ಕ್ರಿಕೆಟ್ ಜಗತ್ತು ಹೊರ ಬರುವ ಮೊದಲೇ ಇಸ್ರೇಲ್‌ನಲ್ಲಿ ಭಾರತ ಮೂಲದ ಅಂಪೈರ್ ಒಬ್ಬರು ಕ್ರಿಕೆಟ್‌ನ ದುರಂತಕ್ಕೆ ಬಲಿಯಾಗಿದ್ದಾರೆ.
ಇಸ್ರೇಲ್‌ನ ರಾಷ್ಟ್ರೀಯ ಕ್ರಿಕೆಟ್ ತಂಡದ ಅಂಪೈರ್ ಹಾಗೂ ಮಾಜಿ ನಾಯಕ 55ರ ಹರೆಯದ ಹಿಲ್ಲೆಲ್ ಆಸ್ಕರ್ ಚೆಂಡು ತಲೆಗೆ ಬಡಿದು ಶನಿವಾರ ಸಾವನ್ನಪ್ಪಿದ್ದಾರೆ.
ಹಿಲ್ಲೆಲ್ ಆಸ್ಕರ್ ದಕ್ಷಿಣದ ಫೋರ್ಟ್‌ಸಿಟಿ ಅಶ್‌ದೊದ್‌ನಲ್ಲಿ ಶನಿವಾರ ಯಂಗ್ ಅಶ್‌ದೊದ್ ಮತ್ತು ಸೂಪರ್ ಲಯನ್ಸ್ ಲಾಡ್ ತಂಡಗಳ ನಡುವಿನ ರಾಷ್ಟ್ರೀಯ ಲೀಗ್ ಪಂದ್ಯದ ವೇಳೆ ಈ ದುರಂತ ಸಂಭವಿಸಿತು.
ಆಸ್ಕರ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಓರ್ವ ಬ್ಯಾಟ್ಸ್‌ಮನ್ ಬಾರಿಸಿದ ಚೆಂಡು ಬೌಲರ್ ತುದಿಯಲ್ಲಿ ನಿಂತಿದ್ದ ಆಸ್ಕರ್ ಅವರ ಕುತ್ತಿಗೆಗೆ ಬಡಿದು ಗಂಭೀರ ಗಾಯಗೊಂಡರು, ಕ್ರೀಸ್ ಬಳಿ ಕುಸಿದು ಬಿದ್ದ ಅವರನ್ನು ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟರು ಎಂದು ಇಸ್ರೇಲ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಆಟಗಾರನಾಗಿ 1982ರಲ್ಲಿ ಇಸ್ರೇಲ್ ತಂಡ ಪ್ರವೇಶಿಸಿದ್ದ ಆಸ್ಕರ್ ಬಳಿಕ ನಾಯಕರಾಗಿ ಸೇವೆ ಸಲ್ಲಿಸಿದ್ದರು. 2006ರಲ್ಲಿ ನಿವೃತ್ತರಾಗಿದ್ದರು. ಬಳಿಕ ಅಂಪೈರ್ ವೃತ್ತಿ ಬದುಕಿಗೆ ಪಾದಾರ್ಪಣೆ ಮಾಡಿದ್ದರು.
‘‘ನಮಗೆ ಈ ಘಟನೆ ಆಘಾತ ತಂದಿದೆ. ಆಸ್ಕರ್ ಅಂತಾರಾಷ್ಟ್ರೀಯ ಅಂಪೈರ್ ಆಗಿದ್ದರು. ಅವರು ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಇಸ್ರೇಲ್ ರಾಷ್ಟ್ರೀಯ ತಂಡದ ಮಾಜಿ ನಾಯಕರಾಗಿ ಸೇವೆ ಸಲ್ಲಿಸಿದ್ದರು’’ ಎಂದು ಇಸ್ರೇಲ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಡ್ನಿಯಲ್ಲಿ ಮಂಗಳವಾರ ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ನ್ಯೂ ಸೌತ್ ವೇಲ್ಸ್ ತಂಡದ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದಾಗ ದಕ್ಷಿಣ ಆಸ್ಟ್ರೇಲಿಯದ ಬೌಲರ್ ಅಬೊಟ್ ಎಸೆದ ಬೌನ್ಸರ್ ಕುತ್ತಿಗೆಗೆ ತಾಗಿ ಆಸೀಸ್‌ನ ಉದಯೋನ್ಮುಖ ಕ್ರಿಕೆಟಿಗ ಹ್ಯೂಸ್ ಗಂಭೀರ ಗಾಯಗೊಂಡು ಗುರುವಾರ ಸಾವನ್ನಪ್ಪಿದ್ದರು. ಹ್ಯೂಸ್ ರಕ್ಷಣೆಗೆ ಹೆಲ್ಮೆಟ್ ಧರಿಸಿದ್ದರು. ಅದು ರಕ್ಷಣೆಗೆ ಬರಲಿಲ್ಲ. ಅಂಪೈರ್‌ಗಳು ಸಾಮಾನ್ಯವಾಗಿ ರಕ್ಷಣೆಗೆ ಹೆಲ್ಮೆಟ್ ಧರಿಸುವುದಿಲ್ಲ. ಆದರೆ ಆಸ್ಕರ್ ಸಾವು ಅಂಪೈರ್‌ಗಳು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕಾದ ಅಗತ್ಯತೆ ಕಂಡು ಬಂದಿದೆ. ಇಸ್ರೇಲ್ ಪೊಲೀಸರು ಅಂಪೈರ್ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎರಡನೆ ಪ್ರಕರಣ: ಐದು ವರ್ಷಗಳ ಹಿಂದೆ ವೇಲ್ಸ್‌ನಲ್ಲಿ ಅಂಪೈರ್ ಒಬ್ಬರು ಫೀಲ್ಡರ್‌ವೋರ್ವ ಎಸೆದ ಚೆಂಡು ಬಡಿದು ಮೃತಪಟ್ಟಿದ್ದರು.
ಇಂಗ್ಲೆಂಡ್ ಅಂಪೈರ್ ಜೆನ್‌ಕಿನ್ಸ್ (72 ವರ್ಷ)2009ರಲ್ಲಿ ಲೀಗ್ ಪಂದ್ಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಫೀಲ್ಡರ್ ಎಸೆದ ಚೆಂಡು ಆಕಸ್ಮಿಕವಾಗಿ ಜೆನ್‌ಕಿನ್ಸ್ ತಲೆಗೆ ತಾಗಿತ್ತು. ಜೆನ್‌ಕಿನ್ಸ್ ಗಂಭೀರ ಗಾಯದಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದರು.