ಜಲಂಧರ್: ವೈದ್ಯ ಲೋಕದ ಪ್ರಕಾರ 11 ತಿಂಗಳ ಹಿಂದೆಯೇ ಮರಣವನ್ನಪ್ಪಿದ ಬಾಬಾ ಆಶುತೋಷ್ ಮೃತ ದೇಹದ ಸಂಸ್ಕಾರಕ್ಕೆ ಭಕ್ತರೇ ಅಡ್ಡಿಯಾಗಿ ನಿಂತಿದ್ದು, ಯಾವುದೇ ಕಾರಣಕ್ಕೂ ಬಾಬಾ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ವ್ಯವಸ್ಥೆಯ ವಿರುದ್ಧವೇ ತೊಡೆತಟ್ಟಿ ನಿಂತಿದ್ದಾರೆ.
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಪಂಜಾಬ್ ಹೈಕೋರ್ಟ್ 15 ದಿನಗಳಲ್ಲಿ ಬಾಬಾ ಆಶುತೋಷ್ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಆದರೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಜಲಂಧರ್‌ನಲ್ಲಿರುವ ನೂರ್ ಮಹಲ್ ಆಶ್ರಮದಲ್ಲಿ ಬೀಡುಬಿಟ್ಟಿರುವ ಭಕ್ತರು ಯಾವುದೇ ಕಾರಣಕ್ಕೂ ಅಂತ್ಯ ಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಬಾಬಾರಾಂಪಾಲ್ ಆಶ್ರಮದ ಮಾದರಿಯಲ್ಲಿ ತಮ್ಮದೇ ಟಾಸ್ಕ್ ಫೋರ್ಸ್ ಸಿದ್ಧಪಡಿಸಿಕೊಂಡಿರುವ ಭಕ್ತರು, ಶಸ್ತ್ರಾಸ್ತ್ರಗಳನ್ನು ಕೂಡ ಸಿದ್ಧಿಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರಿಸ್ಥಿತಿ ಕೈ ಮೀರಿದರೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಕೂಡ ನಾವು ಹಿಂಜರಿಯುವುದಿಲ್ಲ ಎಂದು ಭಕ್ತರು ಹೇಳಿಕೊಂಡಿದ್ದಾರೆ. ಮೂಲಗಳ ಪ್ರಕಾರ ಆಶ್ರಮದ ಸ್ಪೆಷಲ್ ಟಾಸ್ಕ್ ಫೋರ್ಸ್‌ನಲ್ಲಿರುವ ಕೆಲ ಭಕ್ತರ ಬಳಿ ಸುಮಾರು 6 ರಿಂದ 7 ಪರವಾನಗಿ ಸಹಿತ ಬಂದೂಕುಗಳು ಮತ್ತು ರಿವಾಲ್ವರ್‌ಗಳಿವೆ ಎಂದು ತಿಳಿದು ಬಂದಿದೆ. ಇನ್ನು ಹಿಸ್ಸಾರ್‌ನ ಬಾಬಾ ರಾಂಪಾಲ್ ಆಶ್ರಮದಲ್ಲಿ ನಡೆದಿದ್ದ ಹಿಂಸಾಚಾರದಿಂದ ಬುದ್ದಿ ಕಲಿತಂತಿರುವ ಪಂಜಾಬ್ ಪೊಲೀಸರು, ಬಾಬಾ ಆಶುತೋಷ್ ಪ್ರಕರಣದಲ್ಲಿ ನಿಧಾನಗತಿಯ ಮೊರೆ ಹೋಗಿದ್ದಾರೆ. ಅಂತೆಯೇ ವಿವಿಧ ಮೂಲಗಳಿಂದ ಆಶ್ರಮದಲ್ಲಿರುವ ಭಕ್ತರನ್ನು ಮನವೊಲಿಸಲು ಸತತ ಪ್ರಯತ್ನ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲಿ ಆಶ್ರಮದಲ್ಲಿರುವ ಭಕ್ತರು ಪೊಲೀಸರ ಮೇಲೆ ಹಲ್ಲೆ ಮಾಡಬಹುದು ಎಂದು ಮನಗಂಡಿರುವ ಪೊಲೀಸರು ಆಶ್ರಮದ ಬಳಿಯ ತಮ್ಮ ಪೊಲೀಸ್ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತಿದ್ದಾರೆ.
ಇದಲ್ಲದೆ ತುರ್ತು ಪ್ರಹಾರ ದಳ, ಜಲ ಫಿರಂಗಿ ದಳ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳನ್ನು ಆಶ್ರಮದ ಆಯಕಟ್ಟಿನ ದೂರದಲ್ಲಿ ಇರಿಸಿದ್ದಾರೆ. ಆ ಮೂಲಕ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ಮಾನಸಿಕವಾಗಿ ಸಿದ್ಧಗೊಂಡು ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೀವಂತ ಸಮಾಧಿಗೆ ತೆರಳಿರುವ ಬಾಬಾ ಆಶುತೋಷ್ ಮಹಾರಾಜ್ ಅವರು ಕಳೆದ ಜನವರಿ 29ರಂದೇ ದೇಹತ್ಯಾಗ ಮಾಡಿದ್ದಾರೆ ಎಂದು ವೈದ್ಯರು ಹೇಳಿದ ಹಿನ್ನಲೆಯಲ್ಲಿ ಅವರ ಮಗ ದಿಲೀಪ್ ಕುಮಾರ್ ಝಾ ತಮ್ಮ ತಂದೆಯ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪಂಜಾಬ್ ಹೈಕೋರ್ಟ್ ಇನ್ನು 15 ದಿನದಲ್ಲಿ ಬಾಬಾ ಆಶುತೋಷ್ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವಂತೆ ನಿನ್ನೆ ನಿರ್ದೇಶನ ನೀಡಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಕ್ತರು ಬಾಬಾ ಅವರು ಜ್ಞಾನದಲ್ಲಿದ್ದು, ಶೀಘ್ರದಲ್ಲಿಯೇ ಸಮಾಧಿಯಿಂದ ಹೊರಬರುತ್ತಾರೆ ಎಂದು ವಾದಿಸುತ್ತಾ ಬಂದಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದ ಮಂಡಿಸಿರುವ ವೈದ್ಯರು ಸೊನ್ನೆ ಡಿಗ್ರಿ ಉಷ್ಣಾಂಶವಿರುವ ವಾತಾವಾರಣದಲ್ಲಿ ಮಾನವ ಅನ್ನ, ನೀರು, ಗಾಳಿ ಇಲ್ಲದೆ 24 ಗಂಟೆ ಬದುಕುವುದೇ ಕಷ್ಟ. ಬಾಬಾ ಆಶುತೋಷ್ ಅವರು ಕಳೆದ ಜನವರಿ 29ರಂದೇ ಪ್ರಾಣ ತ್ಯಾಗ ಮಾಡಿದ್ದು, ಅವರ ದೇಹ ಕೂಡ ದಿನಕಳೆದಂತೆ ಹಸಿರುಗಟ್ಟುತ್ತಿದೆ. ಇದು ಮೃತದೇಹದ ಲಕ್ಷಣಗಳು ಎಂದು ತಮ್ಮ ವಾದ ಮಂಡಿಸಿದ್ದರು. ಆದರೆ ಇದಾವುದನ್ನೂ ನಂಬದ ಸ್ಥಿತಿಯಲ್ಲಿರುವ ಭಕ್ತರು ಸಮಾಧಿ ಕಾಯುವ ಕಾಯಕದಲ್ಲಿ ತೊಡಗಿದ್ದಾರೆ.
ಇನ್ನು ಪೊಲೀಸರ ಪರಿಸ್ಥಿತಿ ಕೂಡ ಹರ್ಯಾಣ ಪೊಲೀಸರಂತೆಯೇ ಆಗಿದ್ದು, ಅತ್ತ ನ್ಯಾಯಾಲಯ ಇತ್ತ ಭಕ್ತರ ನಡುವೆ ಇಕ್ಕಟ್ಟಿಗೆ ಸಿಲುಕಿದ್ದಾರೆ.