ಪ್ರಮುಖ ವರದಿಗಳು

ಮುತ್ತು ಮದುವೆ: ಪಾರ್ವತಮ್ಮ ತೆರೆದ ಬದುಕಿನ ಪುಟಗಳು

Pinterest LinkedIn Tumblr

Parvathamma-Rajkumar

ತೊಟ್ಟಿಲ ಮಗುವಿದ್ದಾಗಲೇ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರು ನನ್ನನ್ನು ಅವರ ಮನೆಯ ಸೊಸೆಯಾಗಬೇಕು ಎಂದು ನನ್ನ ತಂದೆಯವರ ಬಳಿ ಮಾತು ಕೇಳಿದ್ದರು.

ನನ್ನ ತೊಟ್ಟಿಲ ಮೇಲೆ ಒಂದು ರುಪಾಯಿ ನಾಣ್ಯ ಇಟ್ಟು ಈ ಮಗು ನನ್ನ ಮನೆ ಬೆಳಗುವ ಸೊಸೆಯಾಗಲಿ ಎಂಬ ಹೆಬ್ಬಯಕೆ ಹೊತ್ತಿದ್ದರು. ಈ ದಿನ ನನ್ನ ನಾಮಕರಣದ ದಿನವೂ ಆಗಿತ್ತು. ಮುತ್ತುರಾಜನಿಗೆ ಆಗ ಹತ್ತು ವರ್ಷದ ಪ್ರಾಯ.

ಸಂಗೀತ ಕಲಿಯಲು ನಮ್ಮಲ್ಲೇ ವಾಸವಾಗಿದ್ದ ಮುತ್ತುರಾಜ್ ಬಹಳ ತುಂಟ ಸ್ವಭಾವದವನಾಗಿದ್ದ. ಪಾಠ ಕಲಿಸುವುದರಲ್ಲಿ ಶಿಸ್ತಿನ ಸಿಪಾಯಿ. ಬಲು ಚೂಟಿ, ಹಾಗೇ ಬಹಳ ಘಾಟಿ. ತೊಟ್ಟಿಲು ತೂಗುವ ನೆಪದಲ್ಲಿ ಚಿಕ್ಕ ಮಗುವಾಗಿದ್ದ ನನ್ನನ್ನು ಚಿವುಟಿ, ನಾನು ಅಳುವುದನ್ನು ನೋಡಿ ಸಂಭ್ರಮಿಸುತ್ತಿದ್ದ ಮುತ್ತುರಾಜನನ್ನು ನನ್ನ ತಾಯಿ ಲಕ್ಷ್ಮಮ್ಮ ಗದರಿಸಿ, ನನ್ನನ್ನು ಸಾಂತ್ವನಗೊಳಸಿದ ದಿನಗಳೂ ಇದ್ದವು. ಈ ಕಪ್ಪಗಿರುವ ಹುಡಿಗೀನ ನಾನು ಮದುವೆ ಆಗಬೇಕೇ? ಎಂದು ನನ್ನನ್ನು ಗೇಲಿ ಮಾಡಿದ ದಿನಗಳೂ ಇದ್ದವು. ಮುತ್ತುರಾಜ ಮುಗ್ಧ ಮನಸ್ಸಿನ ತುಂಟ ಬಾಲಕ ಎಂದು ನಮ್ಮ ಮನೆಯಲ್ಲಿ ಎಲ್ಲಿರಿಗೂ ತಿಳಿದಿತ್ತು.

ನಾನು ಐದು ವರ್ಷದವಳಾದಾಗ ಸಾಲಿಗ್ರಾಮದ ಸರ್ಕಾರಿ ಶಾಲೆಗೆ ವಿದ್ಯಾಭ್ಯಾಸಕ್ಕೆ ಸೇರಿದೆ. ಓದಿಗೆ ತಿಲಾಂಜಲಿ ಕೊಟ್ಟಿದ್ದ ಮುತ್ತುರಾಜ್ ನಾಟಕ ಕಂಪನಿ ಮೂಲಕ ಕಲಾವಿದನಾಗುವ ಹಾದಿಯಲ್ಲಿ ಭವಿಷ್ಯ ಅರಸಲು ಹೊರಟಿದ್ದ. ನಾನು ಎಂಟು ವರ್ಷದವಳಾಗಿದ್ದಾಗ ನಡೆದ ಘಟನೆ ಇಂದಿಗೂ ನನ್ನ ನೆನಪಿನಲ್ಲಿದೆ. ರಜಾ ದಿನವೆಂದು ನನ್ನ ಅಜ್ಜಿಯ ಮನೆಯಾದ ಎಡೆಯೂರಿಗೆ ಹೋಗಿದ್ದೆ. ಕಂಪನಿ ನಾಟಕ ಮುಗಿಸಿಕೊಂಡು, ಗಾಜನೂರಿಗೆ ಬಂದಿದ್ದ ಪುಟ್ಟಸ್ವಾಮಿ ನನ್ನನ್ನು ನೋಡುವ ಬಯಕೆಯನ್ನು ಮುತ್ತುರಾಜನಿಗೆ ವ್ಯಕ್ತಪಡಿಸಿ ಮುತ್ತು ಎಡೆಯೂರಿಗೆ ಹೋಗಿ, ಪಾರ್ವತಿಯನ್ನು ಕರೆದುಕೊಂಡು ಬಾ ಎಂದು ಆದೇಶವನ್ನಿತ್ತರು. ಗಾಜನೂರಿಂದ ಏಳು ಕಿ.ಮೀ ದೂರದಲ್ಲಿರುವ ಎಡೆಯೂರಿಗೆ ಸೈಕಲ್ ತೆಗೆದುಕೊಂಡು ಹೋಗು ಎಂಬ ಸಲಹೆಯ ಮೇರೆಗೆ ಮುತ್ತುರಾಜ್ ಎಡೆಯೂರಿಗೆ ಬಂದ.

ನನ್ನನ್ನು ಕರೆತರುವ ಕೆಲಸಕ್ಕಿಂತ ಸೈಕಲ್ ಸವಾರಿಯ ಮೋಜು ಮುತ್ತುರಾಜ್ ಅವರಲ್ಲಿ ಹೆಚ್ಚಾಗಿತ್ತು. ಸೈಕಲ್ ಏರಿ ಎಡೆಯೂರಿನಿಂದ ಹೊರಟ ನಮಗೆ ಮಧ್ಯೆ ದಾರಿಯಲ್ಲಿ ಹಕ್ಕಿ-ಪಕ್ಕಿ ಜನಾಂಗದವರ ಕೆಲವು ಅಂಗಡಿಗಳು ಕಂಡು ಬಂದವು. ನನ್ನನ್ನು ಸೈಕಲ್‌ನಿಂದ ಇಳಿಸಿದ ಮುತ್ತುರಾಜ್ ಅಂಗಡಿಯ ಹತ್ತಿರ ಕರೆದೊಯ್ದು ಎರಡು ಆಣೆ ಕಾಸಲ್ಲಿ ಒಂದು ಲೋಲಾಕನ್ನು ಕೊಡಿಸಿದರು. ಈ ಲೋಲಾಕ್ ಕೊಡಿಸಿದ ವಿಷಯ ಮನೆಯಲ್ಲಿ ಯಾರಿಗೂ ಹೇಳಬೇಡ ಎಂಬ ತಾಕೀತು ಸಹಾ ಮಾಡಿದ್ದರು. ಗಾಜನೂರು ಸೇರಿದ ಅನಂತರ ನನ್ನ ಭಾವಿ ಮಾವ ಪುಟ್ಟಸ್ವಾಮಿ ನನ್ನನ್ನು ಮುದ್ದಾಡಿ ಹರುಷಪಟ್ಟಿದ್ದರು. ಕಿವಿಯಲ್ಲಿದ್ದ ಹೊಸ ಲೋಲಾಕನ್ನು ಕಂಡು ಏನು ಕಂದಾ ಲೋಲಾಕು ಬಹಳ ಚೆನ್ನಾಗಿದೆ ಯಾರು ಕೊಡಿಸಿದ್ದು? ಎಂದು ಕೇಳಿದಾಗ, ನಾನು ಮುತ್ತುರಾಜ್ ಮಾಮ ಕೊಡಿಸಿದ್ದು ಎಂದು ವಯೋ ಸಹಜವಾದ ಮುಗ್ಧತೆಯಿಂದ ಹೇಳಿದ್ದೆ.

ಬಾಗಿಲ ಮರೆಯಿಂದ ನನ್ನನ್ನು ನೋಡುತ್ತಾ ಸುಮ್ಮನಿರು ಎಂದು ಸಂಜ್ಞೆ ಮಾಡುತ್ತಿದ್ದ ಮುತ್ತುರಾಜ್ ನನ್ನು ನೋಡಿದ ಪುಟ್ಟಸ್ವಾಮಿಯವರು ಏನೋ ಮುತ್ತು ಮದುವೆ ಮುಂಚೆಯೇ ನಿನ್ನ ಹೆಂಡತಿ ಬಗ್ಗೆ ಇಷ್ಟು ಕಾಳಜಿ ಪ್ರೀತಿ ಇಟ್ಟುಕೊಂಡಿದ್ದೀಯಾ, ಇನ್ನು ಮದುವೆ ಆದ ಮೇಲೆ ಹೇಗೋ ಎಂದು ಚುಡಾಯಿಸಿದ್ದರು. ನೋಡು ವರದ, ನಾನು ಕಷ್ಟಪಟ್ಟು ಅಷ್ಟು ದೂರದಿಂದ ಸೈಕಲ್‌ನಲ್ಲಿ ಬಂದಿದ್ದೀನಿ, ನನ್ನ ವಿಚಾರಿಸೋದು ಬಿಟ್ಟು ಪಾರ್ವತಿನ ವಿಚಾರಿಸ್ತಾ ಇದ್ದಾರೆ ನಮ್ಮ ಅಪ್ಪಾಜಿ ಎಂದು ಹೇಳಿ ಅಲ್ಲಿಂದ ಮುತ್ತುರಾಜ್ ಕಂಬಿ ಕಿತ್ತಿದ್ದರು. ಮನೆಮಂದಿಯೆಲ್ಲಾ ನಕ್ಕು ನಲಿದ ಪ್ರಸಂಗಗಳಲ್ಲಿ ಇದೂ ಒಂದಾಗಿತ್ತು.

ಕಿರಿಯ ಪ್ರಾಥಮಿಕ ಶಾಲೆಯಿಂದ ಉತ್ತೀರ್ಣಳಾದ ನನಗೆ ಹಿರಿಯ ಪಾಠಶಾಲೆ ಎಂಟನೇ ತರಗತಿಗೆ ಪ್ರವೇಶ ಸಿಕ್ಕಿತು. ನನಗಾಗ ಹನ್ನೆರಡು ವರ್ಷ. ಪುಟ್ಟಸ್ವಾಮಿಯವರು ಸಾಲಿಗ್ರಾಮಕ್ಕೆ ಬಂದು ನನ್ನ ಮತ್ತು ಮತ್ತುರಾಜ್ ಮದುವೆಯ ಬಗ್ಗೆ ಅವಸರ ಮಾಡಿದಾಗ ನಮ್ಮ ತಂದೆ ಅಪ್ಪಾಜಿಗೌಡರು ಎರಡು ವರುಷ ಕಾಲಾವಕಾಶ ಕೋರಿ ಪಾರ್ವತಿ ಇನ್ನೂ ಮಗು, ಅವಳ ಎಸ್‌ಎಸ್‌ಎಲ್‌ಸಿ ಮುಗಿಯಲಿ ನಂತರ ಮದುವೆ ಶಾಸ್ತ್ರ ಮಾಡೋಣ ಎಂಬ ಆಶ್ವಾಸನೆ ಕೊಟ್ಟಿದ್ದರು.

1951ರಲ್ಲಿ ಪುಟ್ಟಸ್ವಾಮಿ ಮಾವ ಅನಾರೋಗ್ಯ ಪೀಡಿತರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಅಸುನೀಗಿದರು. ಮುತ್ತುರಾಜ್, ನಾಗಮ್ಮ, ವರದರಾಜ್ ಮತ್ತು ಶಾರದಮ್ಮ ತಂದೆಯಿಲ್ಲದ ತಬ್ಬಲಿಗಳಾದರು. ಎಳೆಯ ವಯಸ್ಸಿನಲ್ಲಿಯೇ ಸಂಸಾರ ನೌಕೆಯ ಹೊಣೆಗಾರಿಕೆ ಮುತ್ತುರಾಜನ ಹೆಗಲಿಗೆ ಬಿತ್ತು. ಆಗ ಚಿಕ್ಕಪ್ಪ ಭೂಸೆ ನಾಗೇಗೌಡರು ಕುಟುಂಬದ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ತಮ್ಮ ಶಕ್ತಿಗೆ ತಕ್ಕಂತೆ ಸಹಾಯ ಮಾಡಿದರು.

ಐದು ಜನರ ಸಂಸಾರ ನಡೆಸುವ ಹೊಣೆಗಾರಿಕೆ ಹೊತ್ತು ಮುತ್ತುರಾಜ್‌ಗೆ ಕಂಪನಿ ನಾಟಕದಿಂದ ಸಿಗುತ್ತಿದ್ದ ವರಮಾನದಲ್ಲಿ ಸಂಸಾರ ನಡೆಸುವುದು ಬಹಳ ಕಷ್ಟವಾಯಿತು. ಹಿರಿಯರು ಕಾಲವಾದ ಮರುವರ್ಷವೊಂದರಲ್ಲಿಯೇ ಮನೆಯಲ್ಲಿ ಶುಭ ಕಾರ್ಯವಾಗಬೇಕು ಎಂಬ ನಂಬಿಕೆಯ ಪ್ರತೀಕವೋ ಎಂಬಂತೆ ನನ್ನ ಮದುವೆ 25ನೇ ಜೂನ್ 1953, ನಂಜನಗೂಡಿನಲ್ಲಿ ರಾಣಪ್ಪ ಛತ್ರದಲ್ಲಿ ನೆರವೇರಿತು. ನನಗಾಗ ಕೇವಲ ಕೇವಲ ಹದಿನಾಲ್ಕು ವರ್ಷ, ಮುತ್ತುರಾಜ್‌ಗೆ 24ರ ಹರೆಯ.

ಹಣಕಾಸಿನ ತೊಂದರೆಯಿದ್ದ ಮುತ್ತುರಾಜ್, ಸುಬ್ಬಯ್ಯನಾಯ್ಡು ದಂಪತಿಗಳಿಂದ ಸಾಲ ತೆಗೆದುಕೊಂಡು ಮದುವೆಯ ವೆಚ್ಚ ಭರಿಸಿದ್ದರು. ನಮ್ಮ ಮದುವೆಯ ಮುನ್ನಾ ದಿನವೂ ಪಾತ್ರವನ್ನು ನಿರ್ವಹಿಸಿ ಚಾಮರಾಜನಗರದಿಂದ ನೇರವಾಗಿ ನಂಜನಗೂಡಿಗೆ ಬಂದಿದ್ದರು. ಅವರ ಮುಖದ ಮೇಲಿನ ಬಣ್ಣ ಪೂರ್ತಿ ಮಾಸಿರಲಿಲ್ಲ. ಮುತ್ತುರಾಜನ ತಾಯಿಯವರಿಗೆ ಮಗನ ಮದುವೆ ನೆರವೇರಿದ ಜೊತೆಗೆ ದಿವಂಗತ ಪತಿ ಪುಟ್ಟಸ್ವಾಮಿಯವರ ಆಸೆ ಈಡೇರಿಸಿದ ಸಂತಸ.

ಗಾಜನೂರಿನ ಮನೆಯಲ್ಲಿ ನವ ವಧು-ವರರ ಸ್ವಾಗತಿಸುವ ಸಂಪ್ರದಾಯ ಮುಗಿದ ಬಳಿಕ ಮುತ್ತುರಾಜ್ ಕೆಲಸದ ನಿಮಿತ್ತ ಸುಬ್ಬಯ್ಯನಾಯ್ದು ಅವರ ಕಂಪನಿಗೆ ತೆರಳಿದರು. ಕಂಪನಿ ನಾಯಕ ಮುಗಿಸಿ ಗಾಜನೂರಿಗೆ ಬರುವ ತನಕ ನಾನು ಸಾಲಿಗ್ರಾಮದಲ್ಲಿಯೇ ಇರಬೇಕು ಎಂಬುದು ಅವರ ಸಲಹೆ ಆಗಿತ್ತು. ನನ್ನನ್ನು ಬಿಟ್ಟು ಇರಲು ಅವರಿಗೆ ಕಷ್ಟ ಎಂದು ನನಗೆ ಗೊತ್ತಿತ್ತು. ಆದರೆ ಆ ಸಲಹೆ ಸಮಯೋಚಿತ ಮತ್ತು ತಾರ್ಕಿಕವಾಗಿತ್ತು.

– ಪಾರ್ವತಮ್ಮ ರಾಜ್‌ಕುಮಾರ್

Write A Comment