ಬೆಂಗಳೂರು, ಡಿ. 6: ರಾಜ್ಯದಲ್ಲಿನ ದಲಿತರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ದೌರ್ಜನ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.
ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 58ನೆ ಪರಿ ನಿರ್ವಾಣ ದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಪ್ರತಿಮೆಗೆೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಎಲ್ಲ ವರ್ಗದ ಜನರ ರಕ್ಷಣೆ ಸರಕಾರ ಬದ್ಧ. ಯಾರಿಂದಲೂ ಯಾರೊಬ್ಬರ ಮೇಲೆಯೂ ದೌರ್ಜನ್ಯ ನಡೆಯಲು ಬಿಡುವುದಿಲ್ಲ. ಶೋಷಿತರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದ ಅವರು, ರಾಜ್ಯದಲ್ಲಿ ದಲಿತರು ಯಾವುದೇ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಮಹಾನ್ ಮಾನವತಾವಾದಿ. ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಶ್ರಮಿಸಿದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದ ಸಿದ್ದರಾಮಯ್ಯ, ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗದರ್ಶನವನ್ನು ನೀಡಿದ್ದಾರೆ. ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಅಂಬೇಡ್ಕರ್ ಜೀವನ ಎಲ್ಲರಿಗೂ ಆದರ್ಶವಾಗಲಿ ಎಂದು ಹಾರೈಸಿದರು.
ಧಿಕ್ಕಾರದ ಘೋಷಣೆ: ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳ ಸುಧಾರಣೆ ಹಾಗೂ ಮೈಸೂರಿನ ಕುಪ್ಪೆಗಾಲ ಶಾಲೆಯಲ್ಲಿ ಅಸ್ಪಶ್ಯತೆ ಆಚರಣೆ ತಡೆಗಟ್ಟಲು ಆಗ್ರಹಿಸಿ ಸಮತಾ ಸೈನಿಕ ದಳ, ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಸೇರಿ ವಿವಿಧ ದಲಿತ ಸಂಘಟ ನೆಗಳ ಸದಸ್ಯರು ಸಿಎಂ, ಸಮಾಜ ಕಲ್ಯಾಣ ಸಚಿವರ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಸಚಿವ ಆಂಜನೇಯರಿಗೆ ೇರಾವ್ ಹಾಕಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಮಧ್ಯೆ ಪ್ರದೇಶಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು.
ಈ ವೇಳೆ ಮಾತನಾಡಿದ ಎಸ್‌ಎಸ್‌ಡಿ ರಾಜ್ಯಾ ಧ್ಯಕ್ಷ ಎಂ.ವೆಂಕಟಸ್ವಾಮಿ, ಕುಪ್ಪೆಗಾಲ ಶಾಲೆಯಲ್ಲಿನ ಅಸ್ಪಶ್ಯತೆ ತಡೆಗಟ್ಟುವ ದೃಷ್ಟಿಯಿಂದ ಕೂಡಲೇ ಸ್ಥಳಕ್ಕೆ ಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಬೇಕು. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾಲ್ನಡಿಗೆ ಜಾಥಾ: ಅಂಬೇಡ್ಕರ್ ಪರಿನಿಬ್ಬಾಣ ದಿನದ ಹಿನ್ನೆಲೆಯಲ್ಲಿ ದಸಂಸ (ಸಮತಾವಾದ) ರಾಜ್ಯಾಧ್ಯಕ್ಷ ಮಾರಪ್ಪ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ಬಂದು ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಸಚಿವರಾದ ಎಚ್.ಆಂಜನೇಯ, ವಿ.ಶ್ರೀನಿವಾಸ್ ಪ್ರಸಾದ್, ಟಿ.ಬಿ. ಜಯಚಂದ್ರ, ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ, ಛಲವಾದಿ ನಾರಾಯಣಸ್ವಾಮಿ, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.