ಕರ್ನಾಟಕ

ಪ್ರತಿ ಜಿಲ್ಲೆಯ ತಾಲೂಕು ಆಸ್ಪತ್ರೆಯಲ್ಲಿ ‘ಡಯಾಲಿಸಿಸ್ ಘಟಕ’ ಲೋಕಾರ್ಪಣೆ; ಬಾಯಿ-ಹಲ್ಲಿನ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ: ಸಿಎಂ

Pinterest LinkedIn Tumblr

teeth

ಬೆಂಗಳೂರು, ಡಿ.6: ಬಾಯಿ ಮತ್ತು ಹಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸುವ ಅಗತ್ಯವಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ದಂತ ಭಾಗ್ಯ’ ಯೋಜನೆ ಹಾಗೂ ಪ್ರತಿ ಜಿಲ್ಲೆಯ ಒಂದು ತಾಲೂಕು ಆಸ್ಪತ್ರೆಯಲ್ಲಿ ‘ಡಯಾಲಿಸಿಸ್ ಘಟಕ’ಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ತಾನು ಹಳ್ಳಿಯಲ್ಲಿದ್ದಾಗ ಹಲ್ಲುಗಳನ್ನು ಸ್ವಚ್ಛಗೊಳಿಸಲು ಇಜ್ಜಲು, ಇಟ್ಟಿಗೆ ಪುಡಿಯನ್ನು ಬಳಸುತ್ತಿದ್ದೆ. ಮೈಸೂರಿಗೆ ಬಂದ ನಂತರ ಪೇಸ್ಟ್, ಬ್ರಷ್ ಬಳಸಲು ಆರಂಭಿಸಿದೆ. ಆದರೆ, ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಮಂದಿ ಇಜ್ಜಲು, ಇಟ್ಟಿಗೆ ಪುಡಿಯನ್ನು ಬಳಸುತ್ತಿದ್ದಾರೆ. ಬಾಯಿ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ಅವರಲ್ಲಿ ಅರಿವಿನ ಕೊರತೆಯಿದೆ ಎಂದು ಅವರು ಹೇಳಿದರು.

ಹಲ್ಲುಗಳು ಸದೃಢವಾಗಿದ್ದರೆ ಹಲವಾರು ರೋಗಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ. ಆದುದರಿಂದ, ಸರಕಾರ ಬಿಪಿಎಲ್ ಕುಟುಂಬಗಳಲ್ಲಿನ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಹಲ್ಲಿನ ಸೆಟ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ 32 ಸಾವಿರ ಮಂದಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೇವಲ ಎರಡು ಸರಕಾರಿ ದಂತ ವೈದ್ಯಕೀಯ ಕಾಲೇಜುಗಳಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳ ನೆರವನ್ನು ಪಡೆದುಕೊಳ್ಳಲಾಗಿದೆ. ಬಡವರಿಗೆ ಉತ್ತಮ ಗುಣಮಟ್ಟದ ಹಲ್ಲಿನ ಸೆಟ್‌ಗಳನ್ನು ನೀಡಲಾಗುವುದು. ಓರ್ವ ಫಲಾನುಭವಿಯನ್ನು ಕರೆ ತಂದು ಹಲ್ಲಿನ ಸೆಟ್‌ಗಳನ್ನು ಕೊಡಿಸುವ ಆಶಾ ಕಾರ್ಯಕರ್ತೆಯರಿಗೆ 100 ರೂ.ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅವರು ಘೋಷಿಸಿದರು.

ಸಾರ್ವಜನಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ದಂತೆ ನೆರವು ಕೋರಿ ಮನವಿಗಳು ಬರುತ್ತಿರುತ್ತವೆ. ಈ ಪೈಕಿ ಕಿಡ್ನಿ ವೈಫಲ್ಯವುಂಟಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುವವರು ಇದ್ದಾರೆ. ಒಂದು ತಿಂಗಳಿಗೆ ಕನಿಷ್ಠ 10-12 ಸಾವಿರ ರೂ.ಗಳನ್ನು ಡಯಾಲಿಸಿಸ್‌ಗಾಗಿ ಖರ್ಚು ಮಾಡಬೇಕು. ಇಷ್ಟೊಂದು ಪ್ರಮಾಣದ ಹಣವನ್ನು ಖರ್ಚು ಮಾಡಲು ಬಡವರಿಗೆ ಸಾಧ್ಯವಾಗುವುದಿಲ್ಲ. ಆದುದರಿಂದ, ಸರಕಾರ ಡಯಾಲಿಸಿಸ್ ಘಟಕಗಳನ್ನು ಆರಂಭಿಸುವ ನಿರ್ಧಾರ ಕೈಗೊಂಡಿತು ಎಂದು ಅವರು ಹೇಳಿದರು.

ಫಿಸಿಷಿಯನ್ ಹಾಗೂ ತಂತ್ರಜ್ಞರ ಕೊರತೆಯಿಂದಾಗಿ ಮೊದಲ ಹಂತ ದಲ್ಲಿ ಪ್ರತಿ ಜಿಲ್ಲೆಯ ಒಂದು ತಾಲೂಕಿನಂತೆ 30 ಡಯಾಲಿಸಿಸ್ ಘಟಕಗಳು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭ ಮಾಡಲಿವೆ. ಮುಂದಿನ ಸಾಲಿನಲ್ಲಿ ಮತ್ತಷ್ಟು ಘಟಕ ಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸೇವಿಸಿದ ಆಹಾರ ಸರಿಯಾಗಿ ಪಚನವಾಗಿ ಜೀರ್ಣವಾಗಬೇಕು. ಆಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ. ಆದರೆ, ಹಿರಿಯ ನಾಗರಿಕರು ತಮ್ಮ ಹಲ್ಲುಗಳನ್ನು ಕಳೆದುಕೊಂಡು ಆಹಾರವನ್ನು ಸರಿಯಾಗಿ ಸೇವಿಸಲು ಸಾಧ್ಯವಾಗದೆ, ಅನಾರೋಗ್ಯಕ್ಕೆ ಈಡಾ ಗುತ್ತಾರೆ. ಈ ಹಿನ್ನೆಲೆಯಲ್ಲಿ ಸರಕಾರ ಹಿರಿಯ ನಾಗರಿಕರು ನೆಮ್ಮದಿಯಿಂದ ಬಾಳಬೇಕು ಎಂಬ ಸದುದ್ದೇಶದಿಂದ ‘ದಂತಭಾಗ್ಯ’ ಯೋಜನೆ ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.

ಬಾಯಿ ಮತ್ತು ಹಲ್ಲಿನ ಆರೋಗ್ಯ ನೀತಿ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಶಣೈ ಪಂಚಮಾಲ್ ಮಾತನಾಡಿ, ರಾಜ್ಯ ಸರಕಾರವು ಬಾಯಿ ಮತ್ತು ಹಲ್ಲಿನ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಒದಗಿಸಬೇಕು. ಬಾಯಿ ಮತ್ತು ಹಲ್ಲಿನ ರೋಗಗಳಿಂದ ಬಳಲುತ್ತಿರುವವರ ಬಗ್ಗೆ ಸಮೀಕ್ಷೆ ನಡೆಯಬೇಕು. ಅಲ್ಲದೆ, ಇದಕ್ಕಾಗಿ ಆರೋಗ್ಯ ಇಲಾ ಖೆಯಲ್ಲಿ ನಿರ್ದೇಶಕ ಅಥವಾ ಜಂಟಿ ನಿರ್ದೇಶಕರ ಹುದ್ದೆಯನ್ನು ಸೃಷ್ಟಿ ಮಾಡಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಪಿ.ಎಸ್.ವಸ್ತ್ರದ್, ನಿರ್ದೇಶಕ ಡಾ.ಎಚ್.ಸಿ.ರಮೇಶ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಅತುಲ್ ಕುಮಾರ್ ತಿವಾರಿ ಮತ್ತಿತರರು ಉಪಸ್ಥಿತರಿದ್ದರು.

Write A Comment