ಬೆಂಗಳೂರು: ರಾಜಧಾನಿ ಬೆಂಗಳೂರು ಬಾಂಬ್ ದಾಳಿಯಿಂದ ಮತ್ತೊಮ್ಮೆ ತತ್ತರಿಸಿದೆ. ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಿರುವ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಭಾನುವಾರ ರಾತ್ರಿ ಸಂಭವಸಿದ ಬಾಂಬ್ ಸ್ಫೋಟಕ್ಕೆ ಮಹಿಳೆ ಬಲಿಯಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದನಾ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್‌ನ ಬಂಧನದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಮೆಹದಿ ಬಂಧನಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಶಂಕಿತ ಉಗ್ರರು ಟ್ವಿಟರ್ನಲ್ಲಿ ಬೆದರಿಕೆ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಘಟನೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಚರ್ಚ್ ಸ್ಟ್ರೀಟ್‌ನ ಕೊಕೊನಟ್ ಗ್ರೋ ರೆಸ್ಟೋರೆಂಟ್‌ನ ಪ್ರವೇಶದ್ವಾರದಲ್ಲಿ ರಾತ್ರಿ 8.30ರ ಸುಮಾರಿಗೆ ಸುಧಾರಿತ ಸ್ಫೋಟಕ (ಐಇಡಿ) ನೆರವಿನಿಂದ ಬಾಂಬ್ ಸ್ಫೋಟ ಮಾಡಲಾಗಿದೆ. ಘಟನೆಯಲ್ಲಿ ಚೆನ್ನೈ ಮೂಲದ ಭವಾನಿ (38) ಮೃತಪಟ್ಟರು. ಎಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ (23), ಸಂದೀಪ್ (40), ವಿನಯ್ ಹಾಗೂ ಹರೀಶ್ ಎಂಬುವರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪಂಜೆ ಮತ್ತು ಪೇಪರ್ ಸಿಕ್ಕಿದ್ದು, ಪೊಲೀಸರು ಅವನ್ನು ವಶಕ್ಕೆ ಪಡೆದಿದ್ದಾರೆ.
ಭವಾನಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಾಗಿ ನಗರಕ್ಕೆ ಬಂದಿದ್ದರು. ಕುಟುಂಬ ಸದಸ್ಯರ ಜೊತೆಗೆ ಭಾನುವಾರ ರಾತ್ರಿ ಎಂ.ಜಿ.ರೋಡ್‌ಗೆ ಬಂದಿದ್ದರು. ಘಟನೆಯಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11 ಗಂಟೆ ವೇಳೆಗೆ ಮೃತಪಟ್ಟರು. ಕಾರ್ತಿಕ್ ಬೆನ್ನಿಗೆ ಗಾಯವಾಗಿದೆ. ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.