ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಕೇಂದ್ರ ಭಾಗದಲ್ಲಿರುವ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ಇಬ್ಬರು ಶಸ್ತ್ರಧಾರಿ ಉಗ್ರರು ಬುಧವಾರ ಮನಬಂದಂತೆ ಗುಂಡು ಹಾರಿಸಿ 12 ಜನರನ್ನು ಹತ್ಯೆ ಮಾಡಿದ್ದಾರೆ. ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಅತ್ಯಾಧುನಿಕ ಬಂದೂಕು ಮತ್ತು ರಾಕೆಟ್ ಉಡಾಯಿಸುವ ಫಿರಂಗಿಗಳನ್ನು ಹೊಂದಿದ್ದ ವಿಧ್ವಂಸಕರು, ಇಸ್ಲಾಂ ಪರ ಘೋಷಣೆಗಳನ್ನು ಕೂಗುತ್ತ ಕಚೇರಿ ಕಟ್ಟಡದೊಳಗೆ ನುಗ್ಗಿ ದಾಳಿ ನಡೆಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರೂ ತೀವ್ರ ಪ್ರತಿ ದಾಳಿ ನಡೆಸಿದರು. ಆದರೆ ಹಂತಕರ ಸ್ಥಿತಿ ಏನಾಗಿದೆ ಎಂಬುದು ಗೊತ್ತಾಗಿಲ್ಲ.
ಉಗ್ರರ ದಾಳಿಯಲ್ಲಿ ‘ಚಾರ್ಲಿ ಹೆಬ್ದೊ’ ಪತ್ರಿಕೆಯ ಪ್ರಧಾನ ಸಂಪಾದಕ ಸ್ಟೀಫನ್ ಚಾರ್‌ಬೊನಿಯರ್ (ಚಾರ್ಬ್), ವ್ಯಂಗ್ಯಚಿತ್ರಕಾರರಾದ ಕಬು, ಟಿಗ್ನೌಸ್ ಮತ್ತು ವೊಲಿನಸ್ಕಿ ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ಪೊಲೀಸರೂ ಅಸು ನೀಗಿದ್ದಾರೆ.
ಕಳವು ಮಾಡಿದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು, ಮೊದಲು ಪಾದಚಾರಿಗಳಿಗೆ ಡಿಕ್ಕಿ ಹೊಡೆಸಿದರು. ಏಕಾಏಕಿ ಕಟ್ಟಡದೊಳಕ್ಕೆ ನುಗ್ಗಿ, ಗುಂಡು ಹಾರಿಸಿದರು ಎಂದು ಮೂಲಗಳು ಹೇಳಿವೆ.
ಪ್ರವಾದಿ ಅವಹೇಳನಕ್ಕೆ ಪ್ರತೀಕಾರ?
ಫ್ರಾನ್‌್ಸ ರಾಜಧಾನಿ ಪ್ಯಾರಿಸ್‌ನ ಕೇಂದ್ರ ಭಾಗದಲ್ಲಿರುವ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದ ಉಗ್ರರು ‘ಪ್ರವಾದಿಗಳನ್ನು (ಪೈಗಂಬರರು) ಅವಹೇಳನ ಮಾಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದೇವೆ’ ಎಂದು ದಾಳಿಕೋರರು ಕಿರುಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ಬೆಳಿಗ್ಗೆ 11.30ಕ್ಕೆ (ಸ್ಥಳೀಯ ಕಾಲ) ಪತ್ರಿಕಾಲಯಕ್ಕೆ ಇಬ್ಬರು ಸಶಸ್ತ್ರಧಾರಿಗಳು ನುಗ್ಗಿದರು. ಜನರು ಕೂಗಾಡುತ್ತಾ, ಓಡುತ್ತಿದ್ದರು.’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಉಗ್ರರ ಕೋಪಕ್ಕೆ ಕಾರಣ: ವಿಡಂಬನಾತ್ಮಕ ಬರಹಗಳಿಗೆ ಹೆಸರಾದ ‘ಚಾರ್ಲಿ ಹೆಬ್ದೊ’ ಪತ್ರಿಕೆಯು ಪ್ರವಾದಿ ಮಹಮ್ಮದ್ ಪೈಗಂಬರ ಅವರ ವ್ಯಂಗ್ಯಚಿತ್ರಗಳನ್ನು ಪದೇ ಪದೇ ಪ್ರಕಟಿಸುತ್ತಿದೆ ಎಂದು ಇಸ್ಲಾಂ ಮೂಲಭೂತವಾದಿಗಳು ಕ್ರೋಧಿತರಾಗಿದ್ದರು.
ಡೆನ್ಮಾರ್ಕ್‌ನ ‘ಜೆಲ್ಲಾಂಡ್ಸ್‌ಪೋಸ್ಟನ್’ ದೈನಿಕದಲ್ಲಿ ಮೊದಲು ಪ್ರಕಟಗೊಂಡ ಪ್ರವಾದಿ ಮಹಮ್ಮದರ ವಿವಾದಾತ್ಮಕ ವ್ಯಂಗ್ಯಚಿತ್ರವನ್ನು ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ 2006ರ ಫೆಬ್ರುವರಿಯಲ್ಲಿ ‘ಚಾರಿಯಾ ಹೆಬ್ದೊ’ ಶೀರ್ಷಿಕೆಯಡಿ ಪ್ರಕಟಿಸಿತ್ತು. 2011ರಲ್ಲಿ ‘ಚಾರ್ಲಿ ಹೆಬ್ದೊ’ ಪತ್ರಿಕಾಲಯದ ಮೇಲೆ ಬಾಂಬ್ ದಾಳಿ ನಡೆದಿತ್ತು.
ಈ ವಾರಪತ್ರಿಕೆ 2012ರಲ್ಲಿ ಮತ್ತೆ ಇಂತಹದ್ದೇ ವ್ಯಂಗ್ಯಚಿತ್ರ ಪ್ರಕಟಿಸಿದ್ದನ್ನು ಖಂಡಿಸಿ ವಿವಿಧ ದೇಶಗಳಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಮುಸ್ಲಿಂ ಪ್ರಾಬಲ್ಯದ 20 ದೇಶಗಳಲ್ಲಿನ ಫ್ರಾನ್ಸ್‌ನ ಶಾಲೆಗಳು, ಕಾನ್ಸಲೇಟ್ ಕಚೇರಿ, ಸಾಂಸ್ಕೃತಿಕ ಕೇಂದ್ರಗಳ ಮೇಲೂ ದಾಳಿ ನಡೆದಿತ್ತು. ಪತ್ರಿಕೆ ಪ್ರಧಾನ ಸಂಪಾದಕ ಚಾರ್‌ಬೊನಿಯರ್ ಅವರಿಗೆ ಪ್ರಾಣ ಬೆದರಿಕೆ ಇದ್ದ ಕಾರಣ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು.
ಉಗ್ರರ ಕೃತ್ಯ ಖಂಡನೀಯ
ವಾರಪತ್ರಿಕೆ ಕಚೇರಿ ಮೇಲೆ ನಡೆದಿರುವ ಈ ಆಘಾತಕಾರಿ ದಾಳಿಯು ನಿಸಂದೇಹವಾಗಿ ಉಗ್ರರ ಕೃತ್ಯ. ಈ ಪತ್ರಿಕಾಲಯವು ಹಲವು ಸಾರಿ ವಿಧ್ವಂಸಕರ ಕೆಂಗಣ್ಣಿಗೆ ಗುರಿಯಾಗಿತ್ತು. ಉಗ್ರರನ್ನು ಹುಡುಕಿ ಸದೆ ಬಡಿಯುತ್ತೇವೆ.
–ಫ್ರಾಂಸ್ವಾ ಒಲಾಂಡ್, ಫ್ರಾನ್ಸ್ ಅಧ್ಯಕ್ಷ
ಈ ಬರ್ಬರ ಕೃತ್ಯ ಖಂಡನೀಯ.
ನಾವು ಫಾನ್ಸ್ ಜನರೊಟ್ಟಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತೇವೆ. ಪತ್ರಿಕಾ ಸ್ವಾತಂತ್ರವನ್ನು ಪ್ರಬಲವಾಗಿ ಬೆಂಬಲಿಸುತ್ತೇವೆ.
–ಡೇವಿಡ್ ಕ್ಯಾಮೆರಾನ್, ಬ್ರಿಟನ್ ಪ್ರಧಾನಿ
ಸೇನಾ ಶೈಲಿಯಲ್ಲಿ ತರಬೇತಿ ಪಡೆದ ಉಗ್ರರು
‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಮೇಲೆ ದಾಳಿ ನಡೆಸಿದ ಉಗ್ರರ ಧಾರ್ಷ್ಟ್ಯ, ದೃಢ ನಿಶ್ಚಯ ಮತ್ತು ಅಪಾಯಕಾರಿ ದಕ್ಷತೆಗಳನ್ನು ಗಮನಿಸಿದರೆ ಅವರು ಸೇನಾ ಶೈಲಿಯಲ್ಲಿ ತರಬೇತಿ ಪಡೆದಿರಬಹುದು ಎಂಬ ಅನುಮಾನವನ್ನು ಪ್ಯಾರಿಸ್ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಉಗ್ರರ ದಾಳಿ ಅತ್ಯಂತ ಯೋಜಿತ ಮತ್ತು ವೃತ್ತಿಪರ ಕಾರ್ಯಾಚರಣೆ ಎಂಬುದನ್ನು ವಾರಪತ್ರಿಕೆ ಕಚೇರಿ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಮೊಬೈಲ್ ಪೋನ್‌ಗಳಲ್ಲಿ ತೆಗೆದ ಚಿತ್ರ ತೋರಿಸುತ್ತವೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
‘ಉಗ್ರರು ಬಂದೂಕು ಹಿಡಿದಿದ್ದ ರೀತಿ, ಅತ್ಯಂತ ಶಾಂತವಾಗಿ ಆದರೆ ದೃಢವಾಗಿ ದಾಳಿ ನಡೆಸಿದ ವಿಧಾನವನ್ನು ಗಮನಿಸಿದರೆ ಅವರಿಗೆ ಸೇನಾ ಶೈಲಿಯ ತರಬೇತಿ ದೊರೆತಿದೆ ಎಂದು ಹೇಳಬಹುದು. ಈ ದಾಳಿ ಆ ಕ್ಷಣದ ಭಾವೋದ್ರೇಕ ಅಲ್ಲವೇ ಅಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲಾಶ್ನಿಕೋವ್ ಬಂದೂಕುಗಳನ್ನು ಅವರು ದೇಹಕ್ಕೆ ಹತ್ತಿರವಾಗಿ ಹಿಡಿದುಕೊಂಡಿದ್ದರು. ನಿರಂತರವಾಗಿ ಗುಂಡಿನ ಹಾರಾಟ ನಡೆಸದೆ ಗುರಿ ನೋಡಿ ಗುಂಡು ಹಾರಿಸುತ್ತಿದ್ದರು. ಇದು ಅವರಿಗೆ ಬಂದೂಕು ಬಳಕೆ ಗೊತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಗಮನಾರ್ಹ ಅಂಶವೆಂದರೆ ಅವರ ನಿರ್ದಯತೆ. ಅವರಿಗೆ ಸಿರಿಯಾ, ಇರಾಕ್ ಅಥವಾ ಬೇರೆಲ್ಲಾದರೂ ತರಬೇತಿ ದೊರೆತಿರಬೇಕು. ಫ್ರಾನ್ಸ್‌ನಲ್ಲಿಯೇ ಅವರು ತರಬೇತಿ ಪಡೆದಿರುವ ಸಂಭವವೂ ಇದೆ. ಅವರಿಗೆ ದಕ್ಷವಾದ ತರಬೇತಿ ದೊರೆತಿದೆ ಎಂಬುದಂತೂ ಸ್ಪಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾಳಿಯ ನಂತರ ಉಗ್ರರು ಪಲಾಯನ ಮಾಡುವಾಗಲೂ ದ್ವಿಚಕ್ರ ವಾಹನದಲ್ಲಿ ಬಂದ ಪೊಲೀಸ್ ಸಿಬ್ಬಂದಿಯನ್ನು ಕಂಡು ಕಾರು ನಿಲ್ಲಿಸಿದರು. ಅದರಿಂದ ಇಳಿದು ಪೊಲೀಸ್ ಸಿಬ್ಬಂದಿಗೆ ಗುಂಡು ಹಾರಿಸಿ, ಅವರನ್ನು ಕೊಂದು ಪರಾರಿಯಾದರು ಎಂಬುದು ವಾರಪತ್ರಿಕೆ ಕಚೇರಿಯ ಪಕ್ಕದ ಕಟ್ಟಡದ ಮೇಲಿನಿಂದ ತೆಗೆದ ವಿಡಿಯೊದಲ್ಲಿ ದಾಖಲಾಗಿದೆ.
ಉಗ್ರರು ಪರಾರಿ?: ಪತ್ರಿಕೆ ಕಚೇರಿಯಲ್ಲಿ ಹಲವು ನಿಮಿಷ ಕಾಲ ಗುಂಡಿನ ದಾಳಿ ನಡೆಸಿದ ಉಗ್ರರು ಅತ್ಯಂತ ಯೋಜಿತವಾಗಿ ಪರಾರಿಯಾಗಿದ್ದಾರೆ. ಕಪ್ಪು ದಿರಿಸು ಧರಿಸಿದ್ದ ಅವರು ಪತ್ರಿಕೆ ಕಚೇರಿಯ ಹೊರಭಾಗದಲ್ಲಿ ಓಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ತಮ್ಮ ಕಾರು ಏರುವುದಕ್ಕೆ ಮೊದಲು ಗಾಯಗೊಂಡಿದ್ದ ಪೊಲೀಸರತ್ತ ಮತ್ತೆಯೂ ಗುಂಡು ಹಾರಿಸಿದ್ದಾರೆ.
ಪ್ಯಾರಿಸ್‌ಗೆ ಭಾರಿ ಭದ್ರತೆ: ದಾಳಿ ನಡೆಸಿದ ಉಗ್ರರು ಪರಾರಿಯಾಗಿರುವುದರಿಂದ ಪ್ಯಾರಿಸ್ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸಶಸ್ತ್ರ ಪೊಲೀಸರ ಭಾರಿ ಭದ್ರತೆ ಒದಗಿಸಲಾಗಿದೆ. ರೈಲು ನಿಲ್ದಾಣಗಳು, ಪೂಜಾ ಸ್ಥಳಗಳು, ಪತ್ರಿಕಾ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಐಫೆಲ್ ಗೋಪುರದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.