ಬೆಂಗಳೂರು: ಎಚ್1ಎನ್1ನಿಂದ ರಾಜ್ಯದ ವಿವಿಧೆಡೆ ಶುಕ್ರವಾರ ನಾಲ್ವರು ಮೃತಪಟ್ಟಿದ್ದು, 75 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಶೀತ, ನೆಗಡಿಯಿಂದ ಬಳಲುತ್ತಿದ್ದ ಬೆಂಗಳೂರಿನ ಹೊಸಕೋಟೆಯ ಕೂಲಿ ಕಾರ್ಮಿಕ ಮಹಿಳೆ ರತ್ನಮ್ಮ (35) ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ಜ.31ರಂದು ಅವರನ್ನು ದಾಖಲಿಸಲಾಗಿತ್ತು.
‘ಆಸ್ಪತ್ರೆಗೆ ದಾಖಲಾಗಿದ್ದ ದಿನದಂದೇ ರಕ್ತ ಪರೀಕ್ಷೆಯ ಮಾದರಿಯನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಪರೀಕ್ಷೆ ನಡೆಸಿದ ತಜ್ಞರು ರತ್ನಮ್ಮ ಅವರಿಗೆ ಎಚ್1ಎನ್1 ಇರುವುದನ್ನು ಖಚಿತ ಪಡಿಸಿದ್ದರು’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಜನಿ ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಆಲೂರಿನ ನಾಗರಾಜ್ (62) ಎಂಬುವವರು ಜ್ವರದಿಂದ ಶುಕ್ರವಾರ ಮೃತಪಟ್ಟಿದ್ದು, ಪಟ್ಟಣದಲ್ಲಿ ಎಚ್1ಎನ್1 ಜ್ವರ ಹರಡಿದೆ ಎಂಬ ವದಂತಿ ಹಬ್ಬಿ ಆತಂಕ ಸೃಷ್ಟಿಯಾಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಹೊನ್ನಾಳಿ ತಾಲ್ಲೂಕಿನ ಜಯಮ್ಮ (50) ಅವರನ್ನು ಜ.29ರಂದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮರುದಿನ ಮೃತಪಟ್ಟಿದ್ದಾರೆ.
‘ಎಚ್1ಎನ್1 ಸೋಂಕಿನಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆ. ರಕ್ತದ ಮಾದರಿ ಪರೀಕ್ಷೆಯಿಂದ ಇದು ದೃಢಪಟ್ಟಿದೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಹರಪನಹಳ್ಳಿ ತಾಲ್ಲೂಕಿನಲ್ಲೂ ಇಬ್ಬರಿಗೆ ಎಚ್1ಎನ್1 ಸೋಂಕು ಇರುವುದು ಪತ್ತೆಯಾಗಿದೆ. ಹೊನ್ನಾಳಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಸೋಂಕಿತರ ಗ್ರಾಮಗಳಲ್ಲಿ ಟ್ಯಾಮಿಫ್ಲೂ ಮಾತ್ರೆ ವಿತರಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಬಾಗೇನಾಳ ಗ್ರಾಮದ ಲತಾ (48) ಇದೇ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ ಜ.24ರಂದು ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾಯಿಲೆ ಉಲ್ಬಣಗೊಂಡು ದಾವಣಗೆರೆ ಆಸ್ಪತ್ರೆಯಲ್ಲೂ ಗುಣವಾಗದ ಕಾರಣ ಫೆ.2ರಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಫೆ. 3ರಂದು ಪರೀಕ್ಷೆ ಮಾಡಿದಾಗ ಎಚ್1ಎನ್1 ಸೋಂಕು ಇರುವುದು ದೃಢಗೊಂಡಿದೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ಆರೋಗ್ಯ ಸರ್ವೇಕ್ಷಣಾ ವಿಭಾಗದ ಡಾ.ರೇಣುಕಾ ಪ್ರಸಾದ್ ತಿಳಿಸಿದರು.
ಬೀದರ್ ಜಿಲ್ಲೆ ಮೂಲದ ಬಾಬುರಾವ್ ಖಂಡೆ ಮತ್ತು ಬೆಂಗಳೂರಿನ ಮುತ್ತುಲಕ್ಷ್ಮೀ ಎಂಬುವವರು ಎಚ್1ಎನ್1ಗೆ ಬಲಿಯಾಗಿದ್ದು ಗುರುವಾರ ಬೆಳಕಿಗೆ ಬಂದಿತ್ತು. ಕಳೆದ ಎರಡು ದಿನಗಳಲ್ಲಿ ಎಚ್1ಎನ್1ನಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ.