ಕರ್ನಾಟಕ

ಐಎಎಸ್‌ ಅಧಿಕಾರಿ ರವಿ ಅಸಹಜ ಸಾವು: ಅಹೋರಾತ್ರಿ ಧರಣಿ; ಸಿಬಿಐ ತನಿಖೆಗೆ ಆಗ್ರಹ

Pinterest LinkedIn Tumblr

pvec18mar15h D K Ravi 02

ಬೆಂಗಳೂರು: ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ, ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದವು.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಮಂಗಳವಾರ ರವಿ ಅವರ ಸಾವಿನ ಪ್ರಕರಣ ಪ್ರತಿಧ್ವನಿಸಿತು. ತಕ್ಷಣವೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದರು. ಈ ಬೇಡಿಕೆಗೆ ಮಣಿಯದ ಸರ್ಕಾರ, ಸಿಐಡಿ ತನಿಖೆಯ ನಿರ್ಧಾರ ಪ್ರಕಟಿಸಿತು. ಇದರಿಂದ ಕೆರಳಿದ ಬಿಜೆಪಿ, ಜೆಡಿಎಸ್‌ ಸದಸ್ಯರು ಎರಡೂ ಸದನಗಳಲ್ಲಿ ಧರಣಿ ಆರಂಭಿಸಿದರು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಿಬಿಐ ತನಿಖೆಗೆ ಆಗ್ರಹಿಸಿದರು. ಉಪ ನಾಯಕ ಆರ್‌.ಅಶೋಕ, ಬಿಜೆಪಿಯ ಎಸ್‌.ಸುರೇಶ್‌ಕುಮಾರ್, ಕೆ.ಜಿ.ಬೋಪಯ್ಯ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ, ಎನ್‌.ಚೆಲುವರಾಯ ಸ್ವಾಮಿ, ಡಿ.ನಾಗರಾಜಯ್ಯ ಮತ್ತಿತರರು ಸಿಬಿಐ ತನಿಖೆಗೆ ಪಟ್ಟು ಹಿಡಿದರು.

ಬಳಿಕ ಗೃಹ ಸಚಿವ ಕೆ.ಜೆ. ಜಾರ್ಜ್‌ ಉತ್ತರಿಸಲು ಮುಂದಾದರು. ಆಗ ಮುಖ್ಯಮಂತ್ರಿಯೇ ಉತ್ತರ ನೀಡಬೇಕೆಂದು ಪ್ರತಿಪಕ್ಷಗಳ ಸದಸ್ಯರು ಗದ್ದಲ ಮಾಡಿದರು. ಜಾರ್ಜ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಉತ್ತರಿಸಿ, ಸಿಐಡಿ ತನಿಖೆಯ ನಿರ್ಧಾರ ಪ್ರಕಟಿಸಿದರು.

ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿ, ಮತ್ತು ಜೆಡಿಎಸ್‌ ಸದಸ್ಯರು ಸ್ಪೀಕರ್‌ ಪೀಠದ ಎದುರು ಧರಣಿ ಆರಂಭಿಸಿದರು. ಆಗ ಸ್ಪೀಕರ್‌ ಕಲಾಪ ಮುಂದೂಡಿದರು.

ಮಧ್ಯಾಹ್ನ 3.15ಕ್ಕೆ ಕಲಾಪ ಆರಂಭವಾದಾಗ ಆಡಳಿತ ಪಕ್ಷದ ಸಾಲಿನಲ್ಲಿ ಹೆಚ್ಚು ಸದಸ್ಯರು ಇರಲಿಲ್ಲ. ಧರಣಿಯ ನಡುವೆಯೇ ಈ ಬಗ್ಗೆ ಆಕ್ಷೇಪ ಎತ್ತಿದ ಪ್ರತಿಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು. ಆಗ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಕೆಲಕಾಲ ಕಲಾಪ ಮುಂದೂಡಿದರು.

ಧರಣಿ ಕುಳಿತವರಿಗೆ ರೊಟ್ಟಿ ವ್ಯವಸ್ಥೆ
ಅಹೋರಾತ್ರಿ ಧರಣಿ ಆರಂಭಿಸಿರುವ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಸೂಕ್ತ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

ಇದಕ್ಕೂ ಮುನ್ನ ಭೇಟಿ ನೀಡಿದ್ದ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಕೂಡ ಧರಣಿ ನಿರತರಿಗೆ ರೊಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದರು. ಪ್ರತಿಯೊಬ್ಬ ಸದಸ್ಯರಿಗೂ ನೆಲಹಾಸು, ಬೆಡ್‌ಶೀಟ್‌, ತಲೆದಿಂಬು ಮತ್ತು ಒಂದು ಟವಲ್‌ ಒದಗಿಸಲಾಗಿದೆ. ಮೊಗಸಾಲೆಯಲ್ಲಿ ಇದ್ದ ಪತ್ರಕರ್ತರನ್ನೂ ರಾತ್ರಿ 8.30ರ ನಂತರ ಹೊರಗೆ ಕಳುಹಿಸಲಾಯಿತು.

ಬುಧವಾರ ಬೆಳಿಗ್ಗೆ ಕಾಫಿ– ತಿಂಡಿ ವ್ಯವಸ್ಥೆ ಮಾಡುವುದಕ್ಕೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಗದೀಶ ಶೆಟ್ಟರ್‌, ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ಶಾಸಕರು ಅಂತ್ಯಕ್ರಿಯೆ ಮುಗಿಸಿಕೊಂಡು ತಡ ರಾತ್ರಿ ಧರಣಿ ನಿರತರನ್ನು ಸೇರಿಕೊಂಡರು.

ಸಿ.ಎಂ ವಿರುದ್ಧ ಆಕ್ರೋಶ
ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಅಂತಿಮ ದರ್ಶನ ಪಡೆಯಲು ಮಂಗಳವಾರ ಮಧ್ಯಾಹ್ನ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಯಿತು.

ರವಿ ಅವರ ಶವವನ್ನು ಇರಿಸಲಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿ ಕೋಲಾರ ಹಾಗೂ ಸುತ್ತಮುತ್ತಲಿನ ಭಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮುಖ್ಯಾಂಶಗಳು
* ಕೋಲಾರ ಜಿಲ್ಲೆ ಬಂದ್‌ ವೇಳೆ ಹಿಂಸಾಚಾರ ಅಶ್ರುವಾಯು ಪ್ರಯೋಗ
* ಶಾಸಕ ಎಸ್‌.ಎನ್‌.­ನಾರಾಯಣಸ್ವಾಮಿ ಕಚೇರಿ ಮೇಲೆ ಕಲ್ಲು ತೂರಾಟ
* ಡಿಸಿಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌ ಅವರಿಂದ ಸಾವಿನ ತನಿಖೆ

***
ಪ್ರಕರಣದ ಹಿಂದೆ ಸಚಿವರೊಬ್ಬರ ಕೈವಾಡದ  ಅನುಮಾನವಿದೆ. ದೂರವಾಣಿ ಸಂಭಾಷಣೆಯ ಪಟ್ಟಿ ತೆಗೆಸಿ ತನಿಖೆ ನಡೆಸಬೇಕು.
-ವಿ.ಸೋಮಣ್ಣ, ಬಿಜೆಪಿ ಮುಖಂಡ

Write A Comment