ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಾಂತರ ವರದಿ ಸಿದ್ಧಪಡಿಸುವಂತಿಲ್ಲ, ವರದಿಯನ್ನು ಪ್ರಕಟಿಸುವಂತೆಯೂ ಇಲ್ಲ ಎಂದು ಸಿಐಡಿ ಮತ್ತು ಸರ್ಕಾರಕ್ಕೆ ಹೈಕೋರ್ಟ್ ಭಾನುವಾರ ಆದೇಶ ನೀಡಿದೆ.
ತನಿಖೆ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದೂ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆಯಲ್ಲಿ ಸಿಐಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ತಾಕೀತು ಮಾಡಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ತಮ್ಮ ನಿವಾಸದಲ್ಲಿ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಂಡರು. ‘ಪ್ರಕರಣದ ತನಿಖೆ ಮುಂದುವರಿಸಲು ಯಾವುದೇ ತಡೆ ಇಲ್ಲ’ ಎಂದು ನ್ಯಾಯಮೂರ್ತಿ ನಜೀರ್ ಸ್ಪಷ್ಟಪಡಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಸಿಐಡಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಮೂರ್ತಿಯವರು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ಸಿಐಡಿ ಸಲ್ಲಿಸುವ ಮಧ್ಯಾಂತರ ವರದಿಯನ್ನು ಸರ್ಕಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸೋಮವಾರ ಮಂಡಿಸಲಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬಂದಿದ್ದವು. ಈ ಕಾರಣಕ್ಕೆ, ಅರ್ಜಿದಾರರು ತುರ್ತಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಮಧ್ಯಾಂತರ ವರದಿ ಸೋಮವಾರ ಮಂಡನೆಯಾಗಲಿದೆ ಎಂಬ ವರದಿಗಳು ಬರುತ್ತಿವೆ. ಆದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅನ್ವಯ ಇಂಥ ಪ್ರಕರಣಗಳಲ್ಲಿ ಮಧ್ಯಾಂತರ ವರದಿ ಬಹಿರಂಗಪಡಿಸಲು ಅವಕಾಶ ಇಲ್ಲ. ಹಾಗೆ ಮಾಡದಂತೆ ಸರ್ಕಾರಕ್ಕೆ ಆದೇಶ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.
ಎಲ್ಲರ ಕಣ್ಣು ಸಿ.ಎಂ ಮೇಲೆ: ಸಿಐಡಿ ನೀಡುವ ಮಧ್ಯಾಂತರ ವರದಿಯನ್ನು ಸರ್ಕಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ನಂತರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಘೋಷಣೆ ಮಾಡಲಿದೆ ಎನ್ನಲಾಗಿತ್ತು. ಆದರೆ ಹೈಕೋರ್ಟ್ ಆದೇಶದ ಕಾರಣ, ಮಧ್ಯಾಂತರ ವರದಿ ಮಂಡನೆಗೆ ಅವಕಾಶ ಇಲ್ಲವಾಗಿದೆ. ತನಿಖೆ ಸಿಬಿಐಗೆ ವಹಿಸಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ತಾಕೀತು ಮಾಡಿದ್ದಾರೆ. ಹಾಗಾಗಿ, ಈಗ ಎಲ್ಲರ ಗಮನ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಲಿರುವ ನಿರ್ಣಯದತ್ತ ನೆಟ್ಟಿದೆ.
ಆತ್ಮಹತ್ಯೆ: ಎಫ್‌ಎಸ್‌ಎಲ್ ವರದಿ
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರದ್ದು ‘ಆತ್ಮಹತ್ಯೆ’ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸಿಐಡಿಗೆ ಶನಿವಾರ ವರದಿ ಸಲ್ಲಿಸಿದ್ದಾರೆ.
‘ಕತ್ತಿನ ಬಲ ಭಾಗವನ್ನು ಹೊರತುಪಡಿಸಿ ರವಿ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ಮಧ್ಯಾಹ್ನ 11.30 ರಿಂದ 12 ಗಂಟೆ ನಡುವೆ ಸಾವು ಸಂಭವಿಸಿದೆ. ಅವರದು ಕೊಲೆ ಎಂಬುದಕ್ಕೆ ಸಣ್ಣ ಕುರುಹೂ ಇಲ್ಲ. ಘಟನಾ ಸಂದರ್ಭದಲ್ಲಿ ರವಿ ಅವರು ತೊಟ್ಟಿದ್ದ ಬಟ್ಟೆಯಲ್ಲಿ ಸಣ್ಣ ನೆರಿಗೆಯೂ ಮೂಡಿಲ್ಲ. ಹಂತಕರು ಕೊಲ್ಲಲು ಯತ್ನಿಸಿದ್ದರೆ ಪ್ರತಿರೋಧ ತೋರಿ, ರವಿ ಅವರ ಬಟ್ಟೆ ಸುಕ್ಕುಗಟ್ಟುತ್ತಿತ್ತು’ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
‘ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿ, ಮೃತದೇಹ ಸೇರಿದಂತೆ ಇಡೀ ಫ್ಲ್ಯಾಟ್‌ನ 37 ಛಾಯಾಚಿತ್ರಗಳನ್ನು ತೆಗೆದು ವರದಿ ಜತೆ ನೀಡಲಾಗಿದೆ. ಘಟನಾ ದಿನ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ರವಿ ಅವರ ಫ್ಲ್ಯಾಟ್‌ನಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪ ಸುಳ್ಳು. ಸಾಕ್ಷ್ಯಗಳು ನಾಶವಾಗದಂತೆ ಪೊಲೀಸರು ಎಚ್ಚರ ವಹಿಸಿದ್ದರು’ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ಮುಂದುವರಿಸುವುದಕ್ಕೆ ತೊಂದರೆ ಇಲ್ಲ. ಆದರೆ, ತನಿಖೆ ಕುರಿತು ಸಾರ್ವಜನಿಕ ಹೇಳಿಕೆ ನೀಡುವಂತಿಲ್ಲ
ಎಸ್. ಅಬ್ದುಲ್ ನಜೀರ್, ನ್ಯಾಯಮೂರ್ತಿ