ಪ್ರಮುಖ ವರದಿಗಳು

ರೈನಾ ಅಬ್ಬರಕ್ಕೆ ಆರ್‌ಸಿಬಿ ತಬ್ಬಿಬ್ಬು; ಕೊಹ್ಲಿ ಪಡೆಗೆ ತವರಿನಲ್ಲಿ ಮತ್ತೆ ಸೋಲು, ಸೂಪರ್‌ ಕಿಂಗ್ಸ್‌ಗೆ 27 ರನ್‌ಗಳ ಗೆಲುವು

Pinterest LinkedIn Tumblr

pvec23xraina

-ಜಿ.ಶಿವಕುಮಾರ
ಬೆಂಗಳೂರು:  ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಎಡವಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಮೂರನೇ ಸೋಲಿ ನಿಂದಲೂ ಪಾರಾಗಲು ಆಗಲಿಲ್ಲ. ಹೀಗಾಗಿ ತವರಿನ ತಂಡದ ಗೆಲುವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಹೊತ್ತು ಬಂದಿದ್ದ ಉದ್ಯಾನನಗರಿಯ ಕ್ರಿಕೆಟ್‌ ಪ್ರಿಯರು ಮತ್ತೆ ನಿರಾಸೆಗೆ ಒಳಗಾಗಬೇಕಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 27ರನ್‌ಗಳಿಂದ ಆರ್‌ಸಿಬಿಯನ್ನು ಮಣಿಸಿ ಗೆಲುವಿನ ಹಾದಿಗೆ ಮರಳಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌  20 ಓವರ್‌ಗಳಲ್ಲಿ  8 ವಿಕೆಟ್‌ಗೆ 181  ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ವಿರಾಟ್‌ ಕೊಹ್ಲಿ ಬಳಗ 8 ವಿಕೆಟ್‌ ಕಳೆದುಕೊಂಡು 154ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಮಂಕಾದ ಮೆಕ್ಲಮ್‌: ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಕೊಹ್ಲಿ ಮೊದಲು ಫೀಲ್ಡಿಂಗ್‌ ಮಾಡುವ ನಿರ್ಧಾರ ಕೈಗೊಂಡರು. ಎರಡನೇ ಓವರ್‌ನಲ್ಲೇ ಬ್ರೆಂಡನ್‌ ಮೆಕ್ಲಮ್‌ (4) ಅವರ ವಿಕೆಟ್‌ ಪಡೆದ ಯಜುವೇಂದ್ರ ಚಾಹಲ್‌ ನಾಯಕನ ನಿರ್ಧಾರ ಸಮರ್ಥಿಸಿ ಕೊಂಡರು.
ತಾವೆದುರಿಸಿದ ಮೂರನೇ ಎಸೆತವನ್ನು ಬೌಂಡರಿಗಟ್ಟಿದ ಮೆಕ್ಲಮ್‌ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಚಾಹಲ್‌ ಮೆಕ್ಲಮ್‌ಗೆ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. ಚಾಹಲ್‌ ಹಾಕಿದ ಮೂರು ಮತ್ತು ನಾಲ್ಕನೇ ಎಸೆತಗಳನ್ನು ಎಚ್ಚರಿಕೆಯಿಂದಲೇ ಆಡಿದ ಬಲಗೈ ಬ್ಯಾಟ್ಸ್‌ಮನ್‌ ನಂತರದ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಭರದಲ್ಲಿ ಕವರ್‌ ಪಾಯಿಂಟ್‌ನಲ್ಲಿ ರಿಲಿ ರೊಸೊ ಹಿಡಿದ ಸೊಗಸಾದ ಕ್ಯಾಚ್‌ಗೆ ಬಲಿಯಾದರು.

ರೈನಾ-ಸ್ಮಿತ್‌ ಆಸರೆ: ಬಳಿಕ ಡ್ವೇನ್‌ ಸ್ಮಿತ್‌ (39; 29ಎ, 3ಬೌಂ, 3ಸಿ) ಮತ್ತು ಸುರೇಶ್‌ ರೈನಾ ಚೆನ್ನೈಗೆ ಆಸರೆಯಾದರು. ಆರಂಭದಲ್ಲೇ ವಿಕೆಟ್‌ ಬಿದ್ದಿದ್ದರಿಂದ ಇವರಿಬ್ಬರು ತಾಳ್ಮೆಯ ಆಟಕ್ಕೆ ಮುಂದಾದರು. ಹೀಗಾಗಿ ಮೊದಲ ಆರು ಓವರ್‌ಗಳಲ್ಲಿ ಚೆನ್ನೈ ಒಂದು ವಿಕೆಟ್‌ಗೆ 45ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆದರೆ ಎಂಟನೇ ಓವರ್‌ನಲ್ಲಿ ಚೆನ್ನೈ ಆಟ ಮತ್ತೆ ಕಳೆಗಟ್ಟಿತು. ಡೇವಿಡ್‌ ವೈಸ್‌ ಎಸೆದ ಓವರ್‌ನ ಎರಡು ಮತ್ತು ಮೂರನೇ ಎಸೆತಗಳನ್ನು ಸಿಕ್ಸರ್‌ಗಟ್ಟಿದ ಸ್ಮಿತ್‌ ಮರು ಎಸೆತದಲ್ಲಿ ಬೌಂಡರಿ ಬಾರಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಹರ್ಷಲ್‌ ಪಟೇಲ್‌ ಹಾಕಿದ ಒಂಬತ್ತನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಅವರು ಎರಡನೇ ಎಸೆತದ ಗತಿ ಅಂದಾಜಿಸುವಲ್ಲಿ ಎಡವಿದರು. ಚೆಂಡು ಅವರ ಬ್ಯಾಟ್‌ನ ಅಂಚನ್ನು ಸವರಿಕೊಂಡು ಸೀದಾ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರ ಕೈ ಸೇರಿತು.

ಬಳಿಕ ರೈನಾ ಅಬ್ಬರದ ಆಟಕ್ಕೆ ಮುಂದಾದರು ಇಕ್ಬಾಲ್‌ ಅಬ್ದುಲ್ಲಾ ಮತ್ತು ಡೇವಿಡ್‌ ವೈಸ್‌ ಅವರನ್ನು ಚೆನ್ನಾಗಿಯೇ ದಂಡಿಸಿದರು. ಚಾಹಲ್‌ ಹಾಕಿದ 13ನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ ಸಿಡಿಸಿದ ರೈನಾ 29 ಎಸೆತಗಳಲ್ಲಿ ಅರ್ಧಶತಕದ ಸಂಭ್ರಮ ಆಚರಿಸಿದರು.
ಇಷ್ಟಕ್ಕೆ ಅವರ ರನ್‌ ದಾಹ ನೀಗಿದಂತೆ ಕಾಣಲಿಲ್ಲ. ಇದೇ ಓವರ್‌ನ ಐದನೇ ಎಸೆತದಲ್ಲೂ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಬಾನೆತ್ತರದಲ್ಲಿ ತೇಲುತ್ತಾ ಸಾಗಿದ ಚೆಂಡು  ಬೌಂಡರಿ ಗೆರೆ ಬಳಿ ಇದ್ದ ರೊಸೊ ಕೈಯಲ್ಲಿ ಬಂಧಿಯಾಗುತ್ತಿದ್ದಂತೆ ಅವರ ಮಿಂಚಿನ ಇನಿಂಗ್ಸ್‌ಗೆ ತೆರೆ ಬಿತ್ತು. ನಾಯಕ ಮಹೇಂದ್ರ ಸಿಂಗ್‌ ದೋನಿ (13; 13ಎ, 2ಬೌಂ) ಆಟ ನೋಡಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಕಾಡಿತು.

ಪೆವಿಲಿಯನ್‌ ಪೆರೇಡ್‌: ರೈನಾ ಹಾಗೂ ದೋನಿ ವಿಕೆಟ್‌ ಪತನವಾಗುತ್ತಿದ್ದಂತೆ ಚೆನ್ನೈ ಕುಸಿತದ ಹಾದಿ ಹಿಡಿಯಿತು. ಡ್ವೇನ್‌ ಬ್ರಾವೊ (5), ರವೀಂದ್ರ ಜಡೇಜ (8)  ಮತ್ತು ಅಶ್ವಿನ್‌ (5) ಪೆವಿಲಿಯನ್‌ ಪೆರೇಡ್‌ ನಡೆಸಿದರು.

ಕೊನೆಯಲ್ಲಿ  ಫಾಫ್‌ ಡು ಪ್ಲೆಸಿಸ್‌  (ಔಟಾಗದೆ 33; 18ಎ, 4ಬೌಂ, 1ಸಿ) ಮಿಂಚಿನ ಆಟವಾಡಿದ್ದರಿಂದ ತಂಡದ ಮೊತ್ತ 180ರ ಗಡಿ ದಾಟಿತು.

ಉತ್ತಮ ಆರಂಭ: ಕಠಿಣ ಗುರಿ ಎದುರು ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆದಿತ್ತು. ರಿಲಿ ರೊಸೊ (14; 9ಎ, 1ಬೌಂ, 1ಸಿ) ಮತ್ತು ಮನ್ವಿಂದರ್‌ ಬಿಸ್ಲಾ (17; 14ಎ, 3ಬೌಂ) ಮೊದಲ ವಿಕೆಟ್‌ಗೆ 31ರನ್‌ ಕಲೆಹಾಕಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಇವರಿಬ್ಬರ ವಿಕೆಟ್‌ ಉರುಳಿಸಿದ ಆಶಿಶ್‌ ನೆಹ್ರಾ ಪ್ರವಾಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಮತ್ತೆ ವೈಫಲ್ಯ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ (10; 11ಎ, 1ಬೌಂ) ಮತ್ತೆ ವಿಫಲರಾದರು. ಈಶ್ವರ್‌ ಪಾಂಡೆ ಎಸೆತದಲ್ಲಿ ಅವರು ದೊಡ್ಡ ಹೊಡೆತಕ್ಕೆ ಮುಂದಾಗಿ ಬ್ರಾವೊಗೆ ಕ್ಯಾಚ್‌ ನೀಡಿದರು.

ಪಂದ್ಯಕ್ಕೆ ತಿರುವು ನೀಡಿದ ರನ್‌ಔಟ್‌: ಬಳಿಕ ಎಬಿ ಡಿವಿಲಿಯರ್ಸ್‌ ಕ್ರೀಸ್‌ಗೆ ಬಂದರು. ಆಗ ಪ್ರೇಕ್ಷಕರ ಹರ್ಷ ಕೇಳತೀರದು. ಎಲ್ಲರೂ ಎಬಿಡಿ… ಎಬಿಡಿ… ಎಂದು ಕೂಗುತ್ತಾ ಅವರನ್ನು ಸ್ವಾಗತಿಸಿದರು. ಆರಂಭದಿಂದಲೇ ಅಬ್ಬರದ ಆಟಕ್ಕೆ ಮುಂದಾದ ಅವರು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ಬ್ಯಾಟ್‌ ಬೀಸಿದರು.  10 ಎಸೆಗಳನ್ನು ಎದುರಿಸಿದ ಅವರು ಎರಡು ಭರ್ಜರಿ ಸಿಕ್ಸರ್‌ ಸಿಡಿಸಿ 14ರನ್‌ ಗಳಿಸಿದ್ದ ವೇಳೆ ರನ್‌ಔಟ್‌ ಆದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು.

ನಂತರ ನಾಯಕ ವಿರಾಟ್‌ ಕೊಹ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ಒತ್ತಡಕ್ಕೆ ಒಳಗಾದಂತೆ ಕಂಡ ಅವರ ಬ್ಯಾಟ್‌ನಿಂದ ಸರಾಗವಾಗಿ ರನ್‌ ಹರಿದು ಬರಲಿಲ್ಲ. 40 ಎಸೆತಗಳಲ್ಲಿ 50ರನ್‌ ಗಳಿಸಿದ್ದೇ ಇದಕ್ಕೆ ಸಾಕ್ಷಿ, ಇದರ ನಡುವೆಯೇ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸಿದ ಅವರು ಈ ಋತುವಿನಲ್ಲಿ ಮೊದಲ ಅರ್ಧಶತಕ ಪೂರೈಸಿದರು.

ಕಣಕ್ಕಿಳಿಯದ ಗೇಲ್‌
ಆರ್‌ಸಿಬಿ ಬ್ಯಾಟಿಂಗ್‌ ಶಕ್ತಿ ಎನಿಸಿದ್ದ ಕ್ರಿಸ್‌ ಗೇಲ್‌ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಮುಂಬೈ ಎದುರಿನ ಪಂದ್ಯದಲ್ಲಿ ವಿಫಲರಾಗಿದ್ದ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈ ಬಿಡಲಾಗಿತ್ತು. ಹೀಗಾಗಿ ಗೇಲ್‌ ಆಟವನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಹೊತ್ತು  ಕ್ರೀಡಾಂಗಣಕ್ಕೆ ಆಗಮಿಸಿದ್ದ ಅವರ ಅಭಿಮಾನಿಗಳು ನಿರಾಸೆ ಅನುಭವಿಸುವಂತಾಯಿತು.

ಆರಂಭದಲ್ಲಿ ಮಳೆಯ ಆಟ
ಬುಧವಾರ ಸಂಜೆಯಿಂದ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ಕ್ರಿಕೆಟ್‌ ಪ್ರಿಯರು ಸಂಜೆ ಆರು ಗಂಟೆಯಿಂದಲೇ ಕ್ರೀಡಾಂಗಣದ ಒಳಗೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಪಿಚ್‌ ಅನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಇದರ ನಡುವೆಯೇ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರು. 7:15ರ ಸುಮಾರಿಗೆ ಹೊದಿಕೆಯನ್ನು ತೆಗೆದು ಪಿಚ್‌ ಅನ್ನು ಸಿದ್ಧಗೊಳಿಸಲಾಯಿತು. ಇನ್ನೇನೂ ಟಾಸ್‌ ಮುಗಿದು ಆಟ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಮತ್ತೆ ಹನಿ ಹನಿಯಾಗಿ ಮಳೆ ಬೀಳಲಾರಂಭಿಸಿತು. ಹೀಗಾಗಿ ಅಂಗಳದ ಸಿಬ್ಬಂದಿಗಳು ಮತ್ತೆಪಿಚ್‌ ಮೇಲೆ ಹೊದಿಕೆ ಹಾಕಿದರು. ಆಗ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತ್ತು. ಮಳೆ ದೂರವಾಗುವ ಲಕ್ಷಣಗಳು ಗೋಚರಿಸಿದ ಕಾರಣ ಪಂದ್ಯವನ್ನು 25 ನಿಮಿಷ ತಡವಾಗಿ ಅರಂಭಿಸಲಾಯಿತು. ಆರ್‌ಸಿಬಿ ಆಟಗಾರರು ಅಂಗಳಕ್ಕೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಸಿಳ್ಳೆ ಕೇಕೆಗಳ ನಿನಾದ ಮೊಳಗಿತು.

ಸ್ಕೋರ್ ಕಾರ್ಡ್

ಚೆನ್ನೈ ಸೂಪರ್‌ ಕಿಂಗ್ಸ್‌್ 8ಕ್ಕೆ 181 (20 ಓವರ್‌)
ಡ್ವೇನ್‌ ಸ್ಮಿತ್‌ ಸಿ ದಿನೇಶ್‌ ಕಾರ್ತಿಕ್‌ ಬಿ ಹರ್ಷಲ್‌ ಪಟೇಲ್‌  39
ಮೆಕ್ಲಮ್‌ ಸಿ ರಿಲಿ ರೊಸೊ ಬಿ ಯಜುವೇಂದ್ರ ಚಾಹಲ್‌  04
ಸುರೇಶ್‌ ರೈನಾ ಸಿ ರೊಸೊ ಬಿ ಯಜುವೇಂದ್ರ ಚಾಹಲ್‌  62
ದೋನಿ ಸಿ ಡಿವಿಲಿಯರ್ಸ್‌ ಬಿ ಯಜುವೇಂದ್ರ ಚಾಹಲ್‌  13
ರವೀಂದ್ರ ಜಡೇಜ ಸಿ ಡಿವಿಲಿಯರ್ಸ್‌ ಬಿ ಇಕ್ಬಾಲ್‌ ಅಬ್ದುಲ್ಲಾ  08
ಫಾಫ್‌ ಡು ಪ್ಲೆಸಿಸ್‌್ ಔಟಾಗದೆ 33
ಡ್ವೇನ್‌ ಬ್ರಾವೊ ಸಿ ಡಿವಿಲಿಯರ್ಸ್‌ ಬಿ ಇಕ್ಬಾಲ್‌ ಅಬ್ದುಲ್ಲಾ  05
ಆರ್‌.ಅಶ್ವಿನ್‌ ಸಿ ಮನ್ವಿಂದರ್ ಬಿಸ್ಲಾ ಬಿ ಡೇವಿಡ್‌ ವೈಸ್‌  05
ಮೋಹಿತ್‌ ಶರ್ಮ ಬಿ ಮಿಷೆಲ್‌ ಸ್ಟಾರ್ಕ್‌  02
ಆಶಿಶ್‌ ನೆಹ್ರಾ ಔಟಾಗದೆ  00
ಇತರೆ: (ಬೈ–1, ಲೆಗ್‌ ಬೈ–6, ವೈಡ್‌–3)  10

ವಿಕೆಟ್ ಪತನ: 1-12 (ಮೆಕ್ಲಮ್‌; 1.50), 2-70 ( ಸ್ಮಿತ್‌; 8.5), 3-124 (ರೈನಾ; 12.5), 4-132 (ದೋನಿ; 14.1), 5-135 (ಜಡೇಜ;  15.2),6-156 (ಬ್ರಾವೊ; 17.3), 7-168 (ಅಶ್ವಿನ್‌; 18.2), 8-177 (ಮೋಹಿತ್‌; 19.4)

ಬೌಲಿಂಗ್‌:  ಮಿಷೆಲ್‌ ಸ್ಟಾರ್ಕ್‌ 4-0-24-1,ಯಜುವೇಂದ್ರ ಚಾಹಲ್‌ 4-0-40-3,ಹರ್ಷಲ್‌ ಪಟೇಲ್‌ 4-0-28-1, ಡೇವಿಡ್‌ ವೈಸ್‌ 4-0-46-1, ಇಕ್ಬಾಲ್‌ ಅಬ್ದುಲ್ಲಾ 4-0-36-2

ರಾಯಲ್‌ ಚಾಲೆಂಜರ್ಸ್ ಬೆಂಗಳೂರು 8ಕ್ಕೆ 154 (20 ಓವರ್‌)

ಮನ್ವಿಂದರ್‌ ಬಿಸ್ಲಾ ಸಿ ಡು ಪ್ಲೆಸಿಸ್‌ ಬಿ ಆಶಿಶ್‌ ನೆಹ್ರಾ  17
ರಿಲಿ ರೊಸೊ ಬಿ ಆಶಿಶ್‌ ನೆಹ್ರಾ  14
ವಿರಾಟ್‌ ಕೊಹ್ಲಿ ಸಿ ಡ್ವೇನ್‌ ಸ್ಮಿತ್‌ ಬಿ ಆಶಿಶ್‌ ನೆಹ್ರಾ  51
ದಿನೇಶ್‌ ಕಾರ್ತಿಕ್‌ ಸಿ ಡ್ವೇನ್‌ ಬ್ರಾವೊ  ಬಿ ಈಶ್ವರ್‌ ಪಾಂಡೆ  10
ಎಬಿ ಡಿವಿಲಿಯರ್ಸ್‌ ರನ್‌ಔಟ್‌ (ಸ್ಮಿತ್‌/ ದೋನಿ)  14
ಸರ್ಫ್‌ರಾಜ್‌ ಖಾನ್‌ ಸಿ ಮೋಹಿತ್‌ ಶರ್ಮ ಬಿ ರವೀಂದ್ರ ಜಡೇಜ   11
ಡೇವಿಡ್‌ ವೈಸ್‌  ಸಿ ಡ್ವೇನ್‌ ಸ್ಮಿತ್‌ ಬಿ ಡ್ವೇನ್‌ ಬ್ರಾವೊ  22
ಹರ್ಷಲ್‌ ಪಟೇಲ್‌ ಸಿ ಡ್ವೇನ್‌ ಬ್ರಾವೊ ಬಿ ಆಶಿಶ್‌ ನೆಹ್ರಾ  00
ಮಿಷೆಲ್‌ ಸ್ಟಾರ್ಕ್‌ ಔಟಾಗದೆ  09
ಇತರೆ: (ಲೆಗ್‌ ಬೈ–5, ವೈಡ್‌–1)  06

ವಿಕೆಟ್ ಪತನ: 1-31 (ಬಿಸ್ಲಾ; 3.3), 2-33 (ರೊಸೊ; 3.6), 3-61 (ಕಾರ್ತಿಕ್‌; 8.2), 4-85 (ಡಿವಿಲಿಯರ್ಸ್‌ ; 11.3), 5-97 (ಸರ್ಫ್‌ರಾಜ್‌ ; 13.3), 6-123 (ಕೊಹ್ಲಿ; 16.1), 7-123 (ಹರ್ಷಲ್‌ ಪಟೇಲ್‌; 16.2), 8-154 (ವೈಸ್‌; 19.6)

ಬೌಲಿಂಗ್‌: ಈಶ್ವರ್‌ ಪಾಂಡೆ 4-0-21-1, ಮೋಹಿತ್‌ ಶರ್ಮ 4-0-39-0, ಆಶಿಶ್‌ ನೆಹ್ರಾ 4-0-10-4, ರವೀಂದ್ರ ಜಡೇಜ 4-0-37-1, ಡ್ವೇನ್‌ ಬ್ರಾವೊ 3-0-25-1, ಆರ್‌.ಅಶ್ವಿನ್‌ 1-0-17-0

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ  27 ರನ್‌ ಜಯ
ಪಂದ್ಯ ಶ್ರೇಷ್ಠ: ಸುರೇಶ್‌ ರೈನಾ

Write A Comment