ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಅಂಗಡಿ ಮಾಲೀಕನ ಮೇಲೆ ಭಯಾನಕವಾಗಿ ಹಲ್ಲೆಗೆ ಯತ್ನಿಸಲಾಗಿದೆ. ದುಷ್ಕರ್ಮಿಯೊಬ್ಬ ಅಂಗಡಿ ಮಾಲೀಕನ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಮಂಗಳವಾರ ರಾತ್ರಿ ಮೊಬೈಲ್ ಮಾರಾಟದ ಅಂಗಡಿಯ ಮಾಲೀಕ ಠಾಕೂರ್ ಎಂಬವರು ಗ್ರಾಹಕರಿಂದ ಹಣ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬ ಮಚ್ಚಿನಿಂದ ಠಾಕೂರ್ ಅವರ ಮೇಲೆ ಹಲ್ಲೆಗೆ ನಡೆಸಿದ್ದಾನೆ. ಕೂಡಲೇ ಅಲ್ಲಿದ್ದ ಗ್ರಾಹಕರು ಆತನನ್ನು ತಡೆಯುವ ಮೂಲಕ ಠಾಕೂರ್ ಅವರನ್ನು ರಕ್ಷಿಸಿದ್ದಾರೆ. ದುಷ್ಕರ್ಮಿ ಹಲ್ಲೆ ನಡೆಸುವ ಭಯಾನಕ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಕಳೆದ ಕೆಲ ತಿಂಗಳಿನಿಂದ ಒಂದು ದೊಡ್ಡ ಗ್ಯಾಂಗ್ ಅಂಗಡಿ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದು ಪ್ರತಿ ಬಾರಿ ಬಂದಾಗ 1 ಸಾವಿರ ರೂ. ನೀಡಬೇಕೆಂದು ಒತ್ತಾಯ ಮಾಡುತ್ತಾರೆ. ಒಂದು ವೇಳೆ ಹಣ ನೀಡದೇ ಇದ್ದಾಗ ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.