ಬಂಟ್ವಾಳ, ನ.14: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಗುರುವಾರ ನಡೆದಿದೆ.
ಕನ್ಯಾನ ಶೆಟ್ಟಿಬೆಟ್ಟು ನಿವಾಸಿ ಅಬ್ದುಲ್ ಖಾದರ್ ಯಾನೆ ಕರಾಟೆ ಖಾದರ್ (25) ಬಂಧಿತ ಆರೋಪಿಯಾಗಿದ್ದಾನೆ. ಈತ ಜೂ.15ರಂದು ಕನ್ಯಾನ ಪೇಟೆಯಲ್ಲಿ ಪಿಲಿಂಗುಳಿ ಸತೀಶ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆಸಿ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿ ವಿಟ್ಲ ಠಾಣೆಗೆ ಬೇಕಾದವನಾಗಿದ್ದ. ಬಾಳಿಗಾ ಅಝೀಝ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಹಲ್ಲೆ ನಡೆಸಲು ತಯಾರಿ ನಡೆಸಿದ ಆರೋಪದಲ್ಲಿ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿ ಶರತ್ತು ಬದ್ದ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ.
ಪ್ರತಿ ಬುಧವಾರ ಮಂಜೇಶ್ವರ ಠಾಣೆಯಲ್ಲಿ ಸಹಿ ಹಾಕಲು ಬರುವ ಮಾಹಿತಿಯನ್ನು ಅಲ್ಲಿನ ಉಪನಿರೀಕ್ಷಕ ಪ್ರಮೋದ್ ಅವರಿಂದ ಪಡೆದುಕೊಂಡು ವಿಟ್ಲ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಆತ ಈ ಮಾಹಿತಿ ಪಡೆದು ಗುರುವಾರ ಬೆಳಗ್ಗೆ ಠಾಣೆಗೆ ಬರುತ್ತಿದ್ದ ಸಂದರ್ಭ ವಿಟ್ಲ ಠಾಣಾ ಉಪನಿರೀಕ್ಷಕ ರಾಘವೇಂದ್ರ ಟಿ.ಆರ್. ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ. ತಂಡದಲ್ಲಿ ಪ್ರವೀಣ್ ರೈ, ಜನಾದರ್ನ, ವೆಂಕಟೇಶ್ ಇದ್ದರು.