ಮೂರು ವರ್ಷದ ಹಿಂದೆ ಕೆಲಸಕ್ಕಾಗಿ ದೆಹಲಿಯಿಂದ ಆಫ್ರಿಕಾ ಖಂಡದತ್ತ ಮುಖ ಮಾಡಿದಾಗ- ಅಯ್ಯೋ ಒಬ್ಬನೇ ಏನೂ ಮಾಡಲು ಹೋಗಬೇಡ, ಸಾಧ್ಯವಾದಷ್ಟು ಜಾಗೃತನಾಗಿರು, ರಾತ್ರಿ ಹೊತ್ತಿನಲ್ಲಿ ಒಬ್ಬನೇ ತಿರುಗಬೇಡ, ಎಬೋಲಾ ಬಂದ್ರೇನ್ ಗತಿ- ಎಲ್ಲ ತಿಳಿದವರಂತೆ ಹೆದರಿಸಿದವರೇ.
ಆದರೆ ಅದೇನೋ ನನ್ನ ಕಿವಿಗಳಿಗೆ ನಾನಷ್ಟು ಪ್ರಾಮುಖ್ಯತೆ ಕೊಡದ ಕಾರಣ, ಇಲ್ಲಿನ ಸರ್ಕಾರಿ ಏಜೆನ್ಸಿಗಳು, ವಾಣಿಜ್ಯ ಶಾಖೆ, ಬ್ಯುಸಿನೆಸ್ ಸಂಸ್ಥೆಗಳ ಜೊತೆ ಕೆಲಸ ಮಾಡುವಂಥ, ಕಾರ್ಯಕ್ಷೇತ್ರ ಹಿಗ್ಗಿಸಿಕೊಳ್ಳುವಂಥ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬಂದವು. ಅಂತೆಯೇ ಡಬ್ಲೂಇಎಫ್ ಮೀಟಿಂಗ್‌ಗಾಗಿ ರವಾಂಡಗೆ ಹೋಗಬೇಕಾಯಿತು.
ಮೊದಲ ನೋಟಕ್ಕೆ ಇದು ಜೀವನ ಕಂಡುಕೊಳ್ಳಲು ಆಫ್ರಿಕಾದಲ್ಲೇ ಅತ್ಯಂತ ಅಪಾಯರಹಿತ ದೇಶವೆಂಬುದು ಹೊಳೆಯಿತು. ಸ್ವಚ್ಛ ಹಾಗೂ ಸುರಕ್ಷಿತ. ಸಣ್ಣದಾದರೂ ಬೆಳೆಯುವ ಛಲ ಅಗಾಧವಾಗಿರುವ, ಕತ್ತಲಾದ ನಂತರವೂ ಮಹಿಳೆಯರು ನಿರ್ಭಯದಿಂದ ಓಡಾಡಬಹುದಾದ ಎರಡನೇ ದೇಶವೆಂಬ ಹೆಗ್ಗಳಿಕೆ ರವಾಂಡದ್ದು.
ಇಲ್ಲಿನ ರಾಜಧಾನಿ ಕಿಗಾಲಿ 2008ರ ಯುಎನ್ ಹ್ಯಾಬಿಟ್ಯಾಟ್ ಅವಾರ್ಡ್ ಪಡೆದಿದೆ. ನಗರವೊಂದು ಪಡೆಯಬಹುದಾದ ಅತಿ ದೊಡ್ಡ ಪ್ರಶಸ್ತಿ ಇದು. ಎಷ್ಟೆಲ್ಲ ವಿಶೇಷತೆಗಳು… ಕುತೂಹಲ ಹೆಚ್ಚುತ್ತಾ ಹೋಯಿತು. ನಗರದಲ್ಲಿ ಒಂದು ಸುತ್ತು ಬರೋಣವೆಂದು ಹೋದೆ.
ನಾಳೆ ಎನ್ನುವುದು ನಮ್ಮ ಬದುಕಿನಲ್ಲಿ ಇಲ್ಲವೇ ಇಲ್ಲವೇನೋ ಎಂಬಂತೆ ಸ್ಥಳೀಯರು ತಮ್ಮ ದಿನನಿತ್ಯದ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ನಂತರ ತಿಳಿದು ಬಂದದ್ದೇನೆಂದರೆ ಹೊಸ ಬ್ಯುಸಿನೆಸ್ ಆರಂಭಿಸುವ ಹುಕ್ಕಿ ಇದ್ದವರಿಗೆ ಇದು ಸ್ವರ್ಗ. ಸುಲಭವಾಗಿ ದಿನದ ಕಾಲುಭಾಗದ ಸಮಯದಲ್ಲಿ ನಿಮ್ಮ ಎಲ್ಲ ಡಾಕ್ಯೂಮೆಂಟ್‌ಗಳು ವೆರಿಫೈ ಆಗಿ ಬ್ಯುಸಿನೆಸ್ ಶುರು ಹಚ್ಚಿಕೊಂಡು ಕುಳಿತುಬಿಡಬಹುದು!
ಅಲ್ಲಿಂದ ಉಗಾಂಡಕ್ಕೆ ಹಾರಿದರೆ…
ಅವಕಾಶಗಳನ್ನು ಬಳಸಿಕೊಳ್ಳುವ ಛಾತಿ ತೋರಿದರೆ ಅತ್ಯಂತ ಬಡರಾಷ್ಟ್ರವಾಗಿರುವ ಉಗಾಂಡಾದ ಕೃಷಿ ಕ್ಷೇತ್ರದಲ್ಲಿ ಭಾರತ ಹೂಡಿಕೆ ಮಾಡಿದರೆ ನಿವ್ವಳ ಲಾಭ ಗಳಿಸುವ ಸಾಧ್ಯತೆ ಇದೆ. ‘ಆಫ್ರಿಕಾದ ಹಣ್ಣು ತರಕಾರಿಗಳ ಬುಟ್ಟಿ’ ಎಂದೇ ಕರೆಸಿಕೊಳ್ಳುವ ಉಗಾಂಡಕ್ಕೆ ಭಾರತದ ಕಂಪನಿಗಳು ಜ್ಯೂಸ್ ಎಕ್ಟ್ರಾಕ್ಟಿಂಗ್ ಮೆಶೀನ್‌ಗಳನ್ನು ಕೊಡುಗೆ ನೀಡಿ, ಅವರ ನಂಬಿಕೆಗಳಿಸಿದಲ್ಲಿ, ಅದೊಂದು ಉತ್ತಮ ಆರಂಭವಾಗಬಹುದು. ನಿಧಾನವಾಗಿ ಉಗಾಂಡದ ಎಲ್ಲ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ವಿಸ್ತರಿಸಬಹುದು.
ಭಾರತೀಯರಿಗಿದೆ ಅವಕಾಶ
ಪೂರ್ವ ಆಫ್ರಿಕಾದ ದೇಶಗಳು ಕೈಗೆಟುಕುವ ತಂತ್ರಜ್ಞಾನಗಳಿಗಾಗಿ ಭಾರತದತ್ತ ನೋಡುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದರೆ ನಮ್ಮಲ್ಲಿ ಹಂಚಿಕೊಳ್ಳಲು ಬಹಳಷ್ಟಿದೆ. ಹೊಸದನ್ನು ಸೃಷ್ಟಿಸುವಂಥ ಸೃಜನಶೀಲತೆಯಲ್ಲಿ ಕೂಡಾ ನಾವು ಮುಂದಿದ್ದೇವೆ.
ಬೆಳೆಯುತ್ತಿರುವ ಭಾರತ-ಆಫ್ರಿಕಾ ಸಂಬಂಧ ಗಟ್ಟಿಗೊಳ್ಳಲು, ಆಫ್ರಿಕಾದ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕಿದೆ. ಈಗಾಗಲೇ ಹಲವು ಭಾರತೀಯ ಕಂಪನಿಗಳು ಆಫ್ರಿಕಾದಲ್ಲಿ ಭದ್ರವಾಗಿ ಬೇರೂರಿವೆ. ಆಫ್ರಿಕಾ ಮಾರುಕಟ್ಟೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ. ಇನ್ನೂ ಹಲವು ಸಣ್ಣ ಉದ್ದಿಮೆಗಳು ಪೂರ್ವ ಆಫ್ರಿಕಾದಲ್ಲಿ, ಅದರಲ್ಲೂ ಉಗಾಂಡ ಮತ್ತು ರವಾಂಡದಲ್ಲಿ ಮಾರುಕಟ್ಟೆ ಕಂಡುಕೊಳ್ಳಲು ಮನಸ್ಸು ಮಾಡಿವೆ.
ಇಲ್ಲೆಲ್ಲ ಇಂಗ್ಲಿಷ್ ಬಲ್ಲವರಿರುವುದರಿಂದ ಭಾಷೆ ಅಂಥ ಸಮಸ್ಯೆಯೂ ಆಗುವುದಿಲ್ಲ. ಜಾಗತಿಕ ವ್ಯವಹಾರ ತಜ್ಞರು ಆಫ್ರಿಕಾದ ಶ್ರೀಮಂತ ಸಂಪತ್ತುಗಳ ಕಡೆ ಆಸೆಯ ಕಣ್ಗಳಿಂದ ನೋಡುತ್ತಿದ್ದಾರೆ. ಭಾರತ ಈ ದೃಷ್ಟಿಯೊಂದಿಗೆ, ಬೆಳೆಯುತ್ತಿರುವ ದೇಶವೊಂದರ ಅಭಿವೃದ್ದಿಗೆ ಪೂರಕವಾಗಿ ಸ್ಪಂದಿಸಬೇಕು. ಪಶ್ಚಿಮ ಆಫ್ರಿಕಾದಲ್ಲಿರುವ ಸಾಧ್ಯತೆಗಳ ಬಗ್ಗೆ, ಪ್ರಾಕೃತಿಕ ಶ್ರೀಮಂತಿಕೆಯ ಬಗ್ಗೆ ಭಾರತ ಸರಿಯಾದ ಅಧ್ಯಯನ ನಡೆಸಬೇಕು.
ಈ ದೇಶಗಳ ಐಟಿ, ಶಿಕ್ಷಣ, ಉದ್ಯೋಗ ಸೃಷ್ಟಿ, ಸ್ಥಳೀಯ ಸಾಮಾರ್ಥ್ಯಗಳನ್ನು ಗಟ್ಟಿಗೊಳಿಸುವಿಕೆ- ಮನಸ್ಸು ಮಾಡಿದರೆ ಈ ಎಲ್ಲ ವಿಷಯದಲ್ಲೂ ಭಾರತ ಆಫ್ರಿಕಾ ದೇಶಗಳ ಮೆಚ್ಚಿನ ಮಿತ್ರನಾಗಬಲ್ಲದು.
ಇಲ್ಲಿನ ಅಪಾರ ಅರಣ್ಯ ಸಂಪತ್ತು ನಾಶವಾಗದಂತೆ ನೋಡಿಕೊಳ್ಳುತ್ತಲೇ ಯೋಜನೆ ರೂಪಿಸಬೇಕು. ತಾನೂ ಬೆಳೆದು ಇನ್ನೊಬ್ಬರನ್ನೂ ಬೆಳೆಸುವುದರಲ್ಲೇ ಹೆಚ್ಚುಗಾರಿಕೆ ಇರುವುದು.
-ಇಂದ್ರಾಯಣಿ ಮುಳೆ