Uncategorized

ಅಕ್ರಮವಾಗಿ ಕಂಟೈನರ್‌ಗಳಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಲ್ವರ ಸೆರೆ

Pinterest LinkedIn Tumblr

ಬೆಳ್ತಂಗಡಿ, ಜು.9: ಕಡೂರು, ಹಾಸನ ಕಡೆಗಳಿಂದ ಕಾಸರಗೋಡಿಗೆ ಎರಡು ಕಂಟೈನರ್‌ಗಳಲ್ಲಿ ಜಾನುವಾರು ಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಠಾಣೆ ಪೊಲೀಸರು ಬುಧವಾರ ಮುಂಜಾನೆ ಚಾರ್ಮಾಡಿ ಚೆಕ್‌ಪಾಯಿಂಟ್ ಬಳಿ ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹಾಸನ ತಾಲೂಕಿನ ಸತ್ಯಮಂಗಲ ನಿವಾಸಿ ಮಂಜುನಾಥ (35), ಚಿಕ್ಕಮಗಳೂರು ಜಿಲ್ಲೆಯ ಕಳಸಪುರ ಗಾಳಿಹಳ್ಳಿ ನಿವಾಸಿ ಚಂದ್ರಶೇಖರ(31), ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ವಾಜಿದ್ ಪಾಷ(40), ಹಳೆಬೀಡು ಜೆಪಿ ನಗರ ನಿವಾಸಿ ಬಾಬು ಸಾಹೇಬ್ ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಎಸ್ಸೈ ಮಾಧವ ಕೂಡ್ಲು ಹಾಗೂ ಸಿಬ್ಬಂದಿ ಚಾರ್ಮಾಡಿ ಚೆಕ್ ಪಾಯಿಂಂಟ್ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಮೂಡಿಗೆರೆ ಕಡೆಯಿಂದ ಬಂದ ಕಂಟೈನರ್‌ಗಳನ್ನು ನಿಲ್ಲಿಸಿದ್ದು, ಆ ವೇಳೆ ಟೆಂಪೊದಲ್ಲಿದ್ದ ತಂಡ ಪರಾರಿಯಾಗಲು ಯತ್ನಿಸಿತ್ತು. ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಕಂಟೈನರ್‌ಗಳಲ್ಲಿ ಹೋರಿ, ಎಮ್ಮೆ, ದನ, ಕರುಗಳು ಸೇರಿದಂತೆ ಸುಮಾರು 21 ಜಾನುವಾರುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಜಾನುವಾರಗಳ ಅಂದಾಜು ವೌಲ್ಯ 1,37,000 ರೂ. ಹಾಗೂ ವಾಹನಗಳ ಅಂದಾಜು ವೌಲ್ಯ 12 ಲಕ್ಷ ರೂ. ಎಂದು ತಿಳಿದುಬಂದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋ ಶಾಲೆಯಾದ ಪೊಲೀಸ್ ಠಾಣೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊದಲೇ ಸಿಬ್ಬಂದಿ ಕೊರತೆ ಇದ್ದು, ದಿನವೊಂದಕ್ಕೆ 3-4 ಪ್ರಕರಣಗಳಿಗೇನು ಕಡಿಮೆ ಇಲ್ಲ. ಬಿಡುವಿಲ್ಲದೆ ಹಗಲು-ರಾತ್ರಿ ಸಿಬ್ಬಂದಿಕೆಲಸ ಮಾಡುತ್ತಿದ್ದಾರೆ.

ಇದೀಗ ಜಾನುವಾರುಗಳನ್ನು ನೋಡಿಕೊಳ್ಳುವ ಕೆಲಸವೂ ಸೇರಿದೆ. ಕಳೆದ ಎರಡು ದಿನಗಳ ಹಿಂದೆ ಬಂಟ್ವಾಳ ಎಎಸ್ಪಿ ಅಕ್ರಮ ಸಾಗಾಟ ಮಾಡುತ್ತಿದ್ದ 18 ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈಗ 21 ಜಾನುವಾರುಗಳು ಜೊತೆ ಸೇರಿಕೊಂಡಿವೆ. ಸುಮಾರು 39 ಜಾನುವಾರುಗಳು ಬೆಳ್ತಂಗಡಿ ಪೊಲೀಸ್ ಠಾಣೆಯ ಆವರಣದಲ್ಲಿವೆ. ಇದರಿಂದ ಬೆಳ್ತಂಗಡಿ ಪೋಲಿಸ್ ಠಾಣೆ ಗೋ ಶಾಲೆಯಾಗಿ ಮಾರ್ಪಟ್ಟಿದೆ ಎಂದು ತಿಳಿದುಬಂದಿದೆ.

Write A Comment