ದುಬೈ, ಡಿ.26-ಎರಡೂವರೆ ದಶಕ ಭೂಗತ ಚಟುವಟಿಕೆ ನಡೆಸಿ ಪೊಲೀಸರಿಗೆ ಸೆರೆ ಸಿಕ್ಕಿ, ತಿಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಪಾತಕಿ ಛೋಟಾ ರಾಜನ್‌ನನ್ನು ಅಲ್ಲಿಯೇ ಮುಗಿಸಿಹಾಕುವುದಾಗಿ ಮತ್ತೋರ್ವ ಪಾತಕಿ ಛೋಟಾ ಶಕೀಲ್ ಗುಡುಗಿದ್ದಾನೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟನಾಗಿರುವ ಛೋಟಾ ಶಕೀಲ್, ಛೋಟಾ ರಾಜನ್‌ನನ್ನು ತಿಹಾರ್ ಜೈಲಿನಲ್ಲೇ ಮುಗಿಸುತ್ತೇವೆಂದು ಬೆದರಿಕೆ ಹಾಕಿದ್ದಾನೆ. ರಾಷ್ಟ್ರೀಯ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಛೋಟಾ ಶಕೀಲ್ ಇಂದು ದಾವೂದ್, ಭಾಯ್‌ನ 60ನೇ ಹುಟ್ಟುಹಬ್ಬ. ನಮ್ಮ ತಂಡದ ವಿರುದ್ಧ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಛೋಟಾ ರಾಜನ್‌ನನ್ನು ಮುಗಿಸಲು ಸುಪಾರಿ ನೀಡಿದ್ದೇವೆ.
ತಿಹಾರ್ ಜೈಲಿನಲ್ಲೇ ಆತ ಸಾಯುವುದು ಖಚಿತ ಎಂದು ನುಡಿದಿದ್ದಾನೆ.
ದುಬೈನಲ್ಲಿ ದಾವೂದ್ ಇಬ್ರಾಹಿಂನ 60ನೇ ಹುಟ್ಟುಹಬ್ಬ ಆಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂಬುದು ಕೇವಲ ಮಾಧ್ಯಮಗಳ ವದಂತಿ. ನಾವು ಯಾವುದೇ ರೀತಿಯ ಹುಟ್ಟು ಹಬ್ಬ ಆಚರಣೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಡಿ ಕಂಪೆನಿಯಿಂದ ದಾವೂದ್ ಇಬ್ರಾಹಿಂ ನಿವೃತ್ತಿಯಾಗಿ ಧಾರ್ಮಿಕತೆಯತ್ತ ವಾಲುತ್ತಾನೆ ಎಂಬುದು ಕೇವಲ ವದಂತಿ. ದಾವುದ್ ಭಾಯ್‌ನ ಕುರ್ಚಿಯ ಮೇಲೆ ಕೂರಲು ಯಾರಿಂದಲೂ ಸಾಧ್ಯವಿಲ್ಲ. ಬಾಯಿ ಕೊನೆ ಉಸಿರಿರುವವರೆಗೂ ನಮ್ಮ ತಂಡದ ನಾಯಕರಾಗಿ ಮುಂದುವರೆಯುತ್ತಾರೆ. ಯಾವುದೇ ಕಾರಣಕ್ಕೂ ನಿವೃತ್ತಿಯಾಗುವುದಿಲ್ಲ ಎಂದು ಛೋಟಾ ಶಕಿಲ್ ಸ್ಪಷ್ಟಪಡಿಸಿದ್ದಾನೆ. ನಾವು ಈವರೆಗೂ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಒಂದೆಡೆ ಕುಳಿತು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಉಳಿದಂತೆ ಯಾವುದೇ ರೀತಿಯ ಆಡಂಬರಗಳಿಗೆ ಭಾಯಿ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾನೆ.
ಈಗಲೂ ಡಿ ಕಂಪೆನಿಗೆ ದಾವುದ್ ಇಬ್ರಾಹಿಂ ಮುಖ್ಯಸ್ಥರಾಗಿದ್ದಾರೆ. ಸಧ್ಯಕ್ಕೆ ಅವರು ನಿವೃತ್ತಿಯಾಗುವ ಆಲೋಚನೆಯನ್ನು ಮಾಡಿಲ್ಲ. ನಮ್ಮ ವ್ಯವಹಾರದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಛೋಟಾ ರಾಜನ್ ಸೆರೆ ಸಿಕ್ಕ ಮೇಲೆ ನಮ್ಮ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ. ಆತನನ್ನು ಹೇಗೆ ಮುಗಿಸಬೇಕೆಂಬುದು ನಮಗೆ ಗೊತ್ತಿದೆ, ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಅವರಿಗೂ ಒಳಿತು ನಮಗೂ ಒಳಿತು. ಇಲ್ಲವಾದರೆ ತಿಹಾರ್ ಜೈಲ್‌ನಲ್ಲೇ ಹೇಗೆ ಹೊಡೆದು ಹಾಕಬೇಕೆಂಬುದು ಗೊತ್ತಿದೆ ಎಂದು ಶಕೀಲ್ ಅಬ್ಬರಿಸಿದ್ದಾನೆ. ಸಂದರ್ಶನದಲ್ಲಿ ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿರುವ ಆತ, ನಾವು ಕಾನೂನುಬದ್ಧವಾಗಿಯೇ ವಹಿವಾಟು ನಡೆಸುತ್ತಿದ್ದೇವೆ. ಕೆಲವರು ಇದಕ್ಕೆ ಭೂಗತ ಚಟುವಟಿಕೆಯ ಲೇಪವನ್ನು ಹಚ್ಚುತ್ತಿದ್ದಾರೆ. ಭಾರತದಲ್ಲಿ ನಮ್ಮ ಮೇಲೆ ಮೊಕದ್ದಮೆಗಳಿದ್ದರೆ ಕಾನೂನು ರೀತಿಯಲ್ಲೇ ಹೋರಾಟ ನಡೆಸುತ್ತೇವೆಂದು ತಿಳಿಸಿದ್ದಾನೆ.