(ವಿಶೇಷ ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಇಂದು ಎಪ್ರಿಲ್ 11. ಇಂದಿಗೆ ಸರಿಯಾಗಿ ಬರೋಬ್ಬರಿ ಒಂದು ವರ್ಷ. ಕಡಲಲ್ಲಿ ಮುಳುಗುವ ಹೊತ್ತಲ್ಲಿದ್ದ ಸೂರ್ಯ. ಮುಸ್ಸಂಜೆ ಹೊತ್ತಲ್ಲಿ ಕಡಲತೀರದ ಆ ಮನೆಯಲ್ಲಿ ತನ್ನ ಪಾಡಿಗೆ ತಾನು ಮನೆಗೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ದುಷ್ಕರ್ಮಿಯೋರ್ವನ ಅಟ್ಟಹಾಸಕ್ಕೆ ಸಿಕ್ಕು ಆ ತುಂಬು ಗರ್ಬಿಣಿ ಮಹಿಳೆ ಬರ್ಬರ ಕೊಲೆಯಾಗಿ ಹೋಗಿದ್ದರು.
(ಕೊಲೆಯಾದ ಮಹಿಳೆ ಇಂದಿರಾ)
ಕಳೆದ ವರ್ಷ ಏಪ್ರಿಲ್ 11 ರಂದು ಶನಿವಾರ ಸಂಜೆ. ಆ ಆರ್ತನಾಧ, ಮನೆಮಗಳನ್ನು ಕಳೆದುಕೊಂಡ ನೋವಿನ ಕಣ್ಣೀರಿನ ಕೂಗಿಗೆ ಭೋರ್ಗರೆವ ಕಡಲ ಆ ಧ್ವನಿ ಒಂದು ಕ್ಷಣ ಸ್ಥಬ್ಧವಾಗಿದ್ದ ಕ್ಷಣಗಳದು. ಮನೆಯಲ್ಲಿ ಬೇರ್ಯಾರು ಇಲ್ಲದ್ದನ್ನು ನೋಡಿ ಹೊಂಚು ಹಾಕಿ ನೀರು ಕೇಳಲು ಮನೆಗೆ ಬಂದ ಕಟುಕನೊಬ್ಬ ಆ ಮನೆಯಲ್ಲಿದ್ದ ಮೂವತ್ತೆರಡು ವರ್ಷ ಪ್ರಾಯದ ಆರೂವರೆ ತಿಂಗಳ ತುಂಬು ಗರ್ಭಿಣಿಯಾದ ಇಂದಿರಾ ಎಂಬಾಕೆಯನ್ನು ಅಮಾನುಷವಾಗಿ ಬಲಿ ಪಡೆದಿದ್ದ. ಇದೆಲ್ಲಾ ನಡೆದಿದ್ದು ಕುಂದಾಪುರ ತಾಲೂಕಿನ ಗೋಪಾಡಿಯ ಪಡುಗೋಪಾಡಿ ಎಂಬಲ್ಲಿ. ಸಮುದ್ರ ತೀರದ ಹತ್ತಿರವೇ ಇಂದಿರಾ ಅವರದ್ದು ಒಂಟಿಮನೆ. ಅದು ಲಿಂಗಜ್ಜಿ ಮನೆಯೆಂದೆ ಕಳೆದ ಮೂರು ತಲೆಮಾರುಗಳಿಂದ ಸುತ್ತೆಲ್ಲಾ ಪರಿಚಯವಾಗಿದ್ದ ಮನೆ. ಎರಡು ವರ್ಷದ ಅನ್ವಿತ್ ಎಂಬ ಹೆಸರಿನ ತನ್ನ ಮಗನೊಂದಿಗೆ ಇದ್ದ ಇಂದಿರಾ ಮನೆಮಂದಿಯೆಲ್ಲಾ ವಾಪಾಸ್ಸಾಗಿ ನೋಡುವಗ ಕಾಣಸಿಕ್ಕಿದ್ದು ಮನೆಯೆದುರಿನ ಕೊಟ್ಟಿಗೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಹೆಣವಾಗಿ.
(ಕೊಲೆಗಡುಕ ಪ್ರಶಾಂತ್)
ಅದೊಂದು ಪುಟ್ಟ ಬಡ ಕುಟುಂಬ. ಆದರೆ ಅಲ್ಲಿ ಪ್ರೀತಿಗೆ ಒಂದಿನಿತೂ ಬಡತನವಿರಲಿಲ್ಲ. ಇಂದಿರಾಳ ಪತಿ ಆನಂದ್ ಮೀನುಗಾರಿಕೆ ವ್ರತ್ತಿ ಮಾಡಿಕೊಂಡಿದ್ದರು. ಗಂಡ ಹೆಂಡತಿ ಅನ್ಯೋನ್ಯವಾಗಿಯೇ ಇದ್ರು. ಅಲ್ಲದೇ ಪುಟ್ಟ ಪಾಪು ಅನ್ವಿತ್ ಈ ಮನೆಯ ಸಂತಸವನ್ನು ಇನ್ನಷ್ಟು ಹೆಚ್ಚಿಸಿದ್ದ. ಆರೂವರೆ ತಿಂಗಳ ಬಸುರಿಯಾಗಿದ್ದ ಇಂದಿರಾ ಇನ್ನೊಂದು ಮಗುವನ್ನು ಹೆರುತ್ತಾಳೆ ಅದನು ಎತ್ತಿ ಮುದ್ದಾಡಿಸಬೇಕು ಎನ್ನುವ ಬಯಕೆ ಪತಿ ಸಮೇತ ಆಕೆಯ ಕುಟುಂಬಸ್ಥರದ್ದಾಗಿತ್ತು. ಕಡಲ ಸಮೀಪದಲ್ಲೇ ಇರುವ ಈ ಮನೆಯಲ್ಲಿ ಇಂದಿರಾ, ಅವರ ಅಕ್ಕ ಗಿರಿಜಾ, ಗಿರಿಜಾ ಅವರ ಮಗಳು ಪ್ರತಿಮಾ ಹಾಗೂ ಅನ್ವಿತ್ ಮನೆಯಲ್ಲಿರುತ್ತಿದ್ದರು. ದುಡಿಮೆಯನ್ನು ನಂಬಿಕೊಂಡಿದ್ದ ಮನೆಯ ಗಂಡಸರು ವಾರಕ್ಕೊಂದೆರಡು ದಿನ ಮನೆಗೆ ಬಂದು ಹೋಗುವ ಪರಿಪಾಠವಿತ್ತು. ಅಂದು ಗಿರಿಜಾ ಹಾಗೂ ಪ್ರತಿಮಾ ಮನೆಯಿಂದ ಕೆಲಸದ ನಿಮಿತ್ತ ಹೊರಹೋಗಿದ್ರು, ಸಂಜೆ ಮನೆಗೆ ಬಂದು ನೋಡುವಾಗ ಇಂದಿರಾ ಕೊಲೆನಡೆದು ಹೋಗಿತ್ತು.
(ಗೋಪಾಡಿ ಕರಾವಳಿ ಭಾಗ)
ಅಷ್ಟಕ್ಕೂ ಕೊಲೆ ಮಾಡಿದ ಖತರ್ನಾಕ್ ಆರೋಪಿ ಹೊರಗಿನವನೇನೂ ಅಲ್ಲ. ಇಂದಿರಾ ಮನೆಯ ಆಸುಪಾಸಿನವನೇ ಆದ ಪ್ರಶಾಂತ ಮೊಗವೀರ. ಪಕ್ಕಾ ಕ್ರಿಮಿನಲ್ ಆಗಿದ್ದ ಈತ ಅಂದು ಶನಿವಾರ ಸಂಜೆ ಇಂದಿರಾ ಮೊಗವೀರ ತನ್ನ ಮನೆಯಲ್ಲಿ ಎರಡೂವರೆ ವರ್ಷ ಪ್ರಾಯದ ಮಗ ಅನ್ವಿತ್ ನೊಂದಿಗೆ ಮನೆಗೆಲಸದಲ್ಲಿ ಬ್ಯುಸಿಯಾಗಿದ್ದ ವೇಳೆ ಮನೆ ಅಂಗಳಕ್ಕೆ ಬಂದಿದ್ದಾನೆ. ಇಂದಿರಾಳನ್ನು ಉದ್ದೇಶಿಸಿ ಅಕ್ಕಾ ಕುಡಿಯಲು ನೀರು ಕೊಡಿ ಎಂದಿದ್ದಾನೆ. ಆಕೆ ಪಾಪ ಬಾಯಾರಿ ಬಂದಿದ್ದಾನೆ ಎಂದು ತಿಳಿದುಕೊಂಡಾಕೆ ಬಾಟಲಿಯೊಂದರಲ್ಲಿ ನೀರು ತಂದು ಕೊಟ್ಟಿದ್ದಾಳೆ. ಆಗ ಆತ ದೊಡ್ಡ ಬಾಟಲಿಯಲ್ಲಿ ಕೊಡಿ ಎಂದಿದ್ದಾನೆ. ಮನೆಯುಡುಪಿನಲ್ಲಿದ್ದ ಇಂದಿರಾ ದೊಡ್ಡ ಬಾಟಲಿಯಲ್ಲಿ ನೀರು ತರಲು ಒಳ ಹೋದಾಕೆಯನ್ನು ಪ್ರಶಾಂತ್ ಹಿಂಬಾಲಿಸಿ ಆಕೆಯನ್ನು ಬಲಾತ್ಕಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಕೊಸರಿಕೊಂಡಾಗ ಬಲಾತ್ಕಾರವಾಗಿ ಕೊಟ್ಟಿಗೆಗೆ ಎಳೆದೊಯ್ದಿದ್ದ. ಅಲ್ಲಿ ಆಕೆ ಧರಿಸಿದ್ದ ಬಟ್ಟೆಯನ್ನು ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಇಂದಿರಾ ಬೊಬ್ಬೆ ಹೊಡೆದಿದ್ದು ಗಡಿಬಿಡಿಗೊಂಡ ಆತ ಆಕೆಯನ್ನು ಅಲ್ಲಿಯೇ ಇದ್ದ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿ ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದ, ಇಷ್ಟೆಲ್ಲಾ ಅಮಾನವೀಯ ಕ್ರತ್ಯ ನಡೆಸಿ ರಕ್ತಸಿಕ್ತವಾದ ಬಟ್ಟೆಯಲ್ಲಿಯೇ ಮನೆಗೆ ತೆರಳುವ ವೇಳೆ ಅನುಮಾನಗೊಂಡು ಸ್ಥಳಿಯರ ಮಾಹಿತಿ ಮೇರೆಗೆ ಪೊಲೀಸರು ಈತನನ್ನು ಬಂಧಿಸುತ್ತಾರೆ.
(ಬೀದಿದೀಪಗಳ ಅಳವಡಿಕೆ)
ಇಂದಿರಾ ಕೊಲೆ ನಡೆದ ವರ್ಷದ ಹಿಂದೆ ಗೋಪಾಡಿಯ ಈ ಭಾಗ ಹೀಗಿರಲಿಲ್ಲ. ಮನುಷ್ಯರಾದವರೂ ಹೋಗೋಕು ಕಷ್ಟವಾಗುವ ರಸ್ತೆ, ಸುತ್ತಲೂ ಪೊದೆ, ಗಾಳಿ ತೋಪು. ಇನ್ನು ಇಂದಿರಾ ಅವರ ಒಂಟಿ ಮನೆಯಲ್ಲೋ ಸಿ.ಆರ್.ಝಡ್ ಹೆಸರಿನಲ್ಲಿ ವಿದ್ಯುತ್ ಕೂಡ ಕೊಟ್ಟಿರಲಿಲ್ಲ. ಈ ಹಾಗದಲ್ಲಿ ಇದ್ದು ಇಲ್ಲದಂತಾಗಿತ್ತು ಬೀದಿದೀಪಗಳು. ಆದರೇ ಈ ದುರ್ಘಟನೆ ಬಳಿಕ ಎಲ್ಲರೂ ಎಚ್ಚೆತ್ತುಕೊಂಡಿದ್ರು. ರಸ್ತೆಗೆ ಕಾಯಕಲ್ಪ ಒದಗಿಸುವ ಜೊತೆಗೆ ರಸ್ತೆ ಸಮೀಪದ ಪೊದೆಗಳನ್ನು ಕಡಿದು ರಸ್ತೆ ಸುಗಮಗೊಳಿಸಲಾಯ್ತು. ಅದೆಷ್ಟೋ ಸಮಯಗಳಿಂದ ಹೊತ್ತದ ಬೀದಿ ದೀಪಗಳು ಉರಿದವು. ಅಷ್ಟೇ ಅಲ್ಲ ಈ ಭಾಗದಲ್ಲಿ ಸಂಜೆಯಾಯ್ತೆಂದರೇ ಲಂಗುಲಗಾಮಿಲ್ಲದೇ ಪೋಲಿ ಅಲೆಯುತ್ತಿದ್ದ ಪುಡಾರಿಗಳ ವರ್ತನೆಗೆ ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ. ಇನ್ನು ದುರ್ಘಟನೆ ನಡೆದ ಒಂದೆರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ವೈಯಕ್ತಿಕ ಪರಿಹಾರವನ್ನು ಕುಟುಂಬಕ್ಕೆ ನೀಡಿದ್ರು. ಎಸ್ಪಿ ಅಣ್ಣಾಮಲೈ ಕುಟುಂಬಕ್ಕೆ ‘ವಿಕ್ಟಿಮ್ ಕಾಂಪನ್ಸೆಶನ್ ಪಂಡ್’ ಅಡಿಯಲ್ಲಿ ಮೂರು ಲಕ್ಷ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದರು.
(ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್)
ಇನ್ನು ಗರ್ಭಿಣಿಯಾದ ಇಂದಿರಾ ಹಾಗೂ ಆಕೆ ಹೊಟ್ಟೆಲ್ಲಿದ್ದ ಬ್ರೂಣದ ಹತ್ಯೆಗೆ ಕಾರಣನಾದ ಪ್ರಶಾಂತ ಸದ್ಯ ಜೈಲು ಕಂಬಿ ಹಿಂದಿದ್ದಾನೆ. ಅಲ್ಲಿಯೂ ನಟೋರಿಯಸ್ ಆಗಿರುವ ಆತ ಪಕ್ಕಾ ಕ್ರಿಮಿನಲ್ ರೀತಿಯೇ ಎಲ್ಲರ ಬಳಿ ಮಾತನಾಡುತ್ತಿದ್ದಾನಂತೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಸ್ವಸ್ಥ ಸಮಾಜದಲ್ಲಿ ಬದುಕಲು ಅನರ್ಹನಗಿರುವ ಪ್ರಶಾಂತನಿಗೆ ಗಲ್ಲು ಶಿಕ್ಷೆಯಾಗಬೇಕೆಂಬುದು ಊರಿನವರು ಹೇಳುವ ಮಾತುಗಳು. ಇಂದಿರಾ ಕೊಲೆಯಿಂದ ನೊಂದು ನ್ಯಾಯಕ್ಕಾಗಿ ಮೊರೆಯಿಟ್ಟ ಆಕೆ ಕುಟುಂಬದ ಪರವಾಗಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರು ಸರಕಾರದ ಪರ ವಿಶೇಷ ನ್ಯಾಯವಾದಿಯಾಗಿ ವಾದ ಮಂಡಿಸಲಿದ್ದಾರೆ.
ಇಂದಿರಾ ಅತ್ಯಾಚಾರದ ಯತ್ನಕ್ಕೊಳಗಾಗಿ ಕಿರಾತಕನಿಂದ ಕೊಲೆಯಾಗಿ ಒಂದು ವರ್ಷ ಕಳೆದರೂ ಅವರ ಮನೆಯವರನ್ನು ಸೇರಿದಂತೆ ಊರಿನ ಯಾರು ಈ ಘಟನೆಯನ್ನು ಮರೆತಿಲ್ಲ. ಇಂತಹಾ ದುರ್ಘಟನೆ ಎಲ್ಲೂ ನಡೆಯಬಾರದು ಅದಕ್ಕಾಗಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಈ ಭಾಗದ ಸಮಾಜ ಸೇವಕ ಗಣೇಶ್ ಪುತ್ರನ್ ಗೋಪಾಡಿ.
ಒಟ್ಟಿನಲ್ಲಿ ಆರೋಪಿಗೆ ಶಿಕ್ಷೆಯಾಗಲಿ..ಆತನಿಗಾಗುವ ಶಿಕ್ಷೆ ಇಂತಹಾ ಕ್ರತ್ಯವೆಸಗುವ ಕಾಮಾಂಧ ಕಿರಾತಕರಿಗೆ ಎಚ್ಚರಿಕೆ ಪಾಠವಾಗಲಿ.
ಗೋಪಾಡಿ ‘ಮಹಿಳೆ ಮರ್ಡರ್’-ಸಂಬಂಧಿತ ಸುದ್ಧಿಗಳು
ಗೋಪಾಡಿ: ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಅತ್ಯಾಚಾರ ನಡೆಸಿ ಕೊಲೆ ಶಂಕೆ; ಶಂಕಿತ ಆರೋಪಿಯ ಬಂಧನ
ನೀರು ಕೇಳಿ ಜೀವವನ್ನೇ ತೆಗೆದ ಯುವಕ; ಅರೆಸ್ಟ್ ಆಗಿರುವ ಕ್ರಿಮಿನಲ್ ಹಿನ್ನೆಲೆಯ ಕಾಮುಕ
ಗೋಪಾಡಿ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ: ನ್ಯಾಯಕ್ಕಾಗಿ ಬೀದಿಗಿಳಿದ ಮಹಿಳೆಯರು
ಗೋಪಾಡಿಯಲ್ಲಿ ಕೊಲೆಯಾದ ಗರ್ಭಿಣಿ ಮಹಿಳೆ ಇಂದಿರಾ ಮನೆಗೆ ಉಡುಪಿ ಎಸ್ಪಿ ಭೇಟಿ; ನಿಸ್ಪಕ್ಷಪಾತ ತನಿಖೆಯ ಭರವಸೆ
ಗೋಪಾಡಿಯ ಇಂದಿರಾ ಕೊಲೆ ಪ್ರಕರಣ; ಮೃತಳ ಮನೆಗೆ ಸಚಿವ ಸೊರಕೆ, ಶಾಸಕ ಹಾಲಾಡಿ ಭೇಟಿ; ಸಚಿವರಿಂದ ಪರಿಹಾರದ ಭರವಸೆ